ಮಡಿಕೇರಿ ಡಿ.6 : ನವಕಾನೂನು ಪದವೀಧರರಿಗೆ ಪ್ರೋತ್ಸಾಹಧನ ನೀಡುವ ಯೋಜನೆಗೆ 2023-24 ನೇ ಸಾಲಿನಲ್ಲಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ತ್ವರಿತವಾಗಿ ತಲುಪಿಸುವ ಉದ್ದೇಶದಿಂದ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿದ್ದು, ಅರ್ಹ ನವಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹರಿರುವ ನವಕಾನೂನು ಪದವೀಧರರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಸ್ವಯಂ ದೃಢೀಕರಿಸಿದ ದಾಖಲೆ ಪ್ರತಿಗಳೊಂದಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ, ಕೊಡಗು ಮಡಿಕೇರಿ ಮತ್ತು 2 ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ, ಕೊಡಗು ಮಡಿಕೇರಿ(ಕಾರ್ಯ ನಿರ್ವಹಣೆ ವಿರಾಜಪೇಟೆ), ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಸೋಮವಾರಪೇಟೆ, ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಪೊನ್ನಂಪೇಟೆ ಹಾಗೂ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಕುಶಾಲನಗರ ಇಲ್ಲಿಗೆ ಸಂಬಂಧಪಟ್ಟ ಹಿರಿಯ ನ್ಯಾಯಾಧೀಶರುಗಳ ಮುಖಾಂತರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜನವರಿ, 12 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರ ಕಚೇರಿ, ಮಡಿಕೇರಿ ಇಲ್ಲಿ ಸಂಪರ್ಕಿಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಚ್.ಸಿ.ಶ್ಯಾಮ್ ಪ್ರಸಾದ್ ಅವರು ತಿಳಿಸಿದ್ದಾರೆ.
ಷರತ್ತುಗಳು: ಈ ಯೋಜನೆಯು 2023-24 ನೇ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ವಕೀಲರ ಷರತ್ತಿನಡಿಯಲ್ಲಿ 2022 ರ ಜೂನ್, 01 ರಿಂದ 2023 ರ ಮೇ, 31 ರವರೆಗಿನ ಅವಧಿಯಲ್ಲಿ ವಕೀಲ ವೃತ್ತಿಗೆ ನೋಂದಾಯಿಸಿದವರಿಗೆ ಮಾತ್ರ ಅನ್ವಯವಾಗುವುದು.
ಈ ಯೋಜನೆಯಡಿಯಲ್ಲಿ ಪ್ರೋತ್ಸಾಹಧನ ಮೊತ್ತ ಪ್ರತಿ ಮಾಹೆಗೆ ರೂ.2 ಸಾವಿರ ಒಟ್ಟು 24 ತಿಂಗಳುಗಳ ಅವಧಿಗೆ ಸೀಮಿತವಾಗಿರುವುದು. ಸರ್ಕಾರಿ, ಅರೆ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ವಯೋನಿವೃತ್ತಿ ಕಡ್ಡಾಯ ನಿವೃತ್ತಿ ಮತ್ತು ಸ್ವಇಚ್ಚಾ ನಿವೃತ್ತಿ ಹೊಂದಿದ ನಂತರ ವಕೀಲ ವೃತ್ತಿ ನಡೆಸಲು ಇಚ್ಚಿಸುವ ಕಾನೂನು ಪದವೀಧರರು ಮತ್ತು ಅಂತಹ ಯಾವುದೇ ಸೇವೆಯಿಂದ ತೆಗೆದುಹಾಕಲ್ಪಟ್ಟ ಕಾನೂನು ಪದವೀಧರರು ಪ್ರೋತ್ಸಾಹಧನ ಪಡೆಯಲು, ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ/ ಕುಟುಂಬದ ವಾರ್ಷಿಕ ವರಮಾನದ ಮಿತಿಯು ರೂ.40 ಸಾವಿರ ಮೀರತಕ್ಕದ್ದಲ್ಲ. ಇಂತಹುದೇ ಸೌಲಭ್ಯವನ್ನು ಈ ಯೋಜನೆ/ ಇತರೆ ಯೋಜನೆಯಡಿ ಅಥವಾ ರಾಜ್ಯ ಸರ್ಕಾರದ ಬೇರೆ ಯಾವುದೇ ಇಲಾಖೆಯ ಯೋಜನೆಯಡಿ ಆಯ್ಕೆಗೊಂಡ ಫಲಾನುಭವಿಗಳು ಈ ಯೋಜನೆಯ ಸೌಲಭ್ಯಗಳಿಗೆ ಅರ್ಹರಾಗುವುದಿಲ್ಲ.
ಹೊಸದಾಗಿ ವಕೀಲರ ವೃತ್ತಿಯಲ್ಲಿ ತೊಡಗುವ ಕಾನೂನು ಪದವೀಧರರು ರಾಜ್ಯ ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿಸಿದ ನಂತರ ಸ್ಥಳೀಯ ವಕೀಲರ ಸಂಘದ ಅಧ್ಯಕ್ಷರಿಂದ ಪ್ರಮಾಣ ಪತ್ರ ಪಡೆದು ಸಂಬಂಧಪಟ್ಟ ಸಮಿತಿಯ ಸಂಬಂಧಿತ ತಾಲ್ಲೂಕಿನ ಹಿರಿಯ ನ್ಯಾಯಾಧೀಶರುಗಳ ಮುಖಾಂತರ ಮತ್ತು ಜಿಲ್ಲಾ ಹಂತದಲ್ಲಿ ಅರ್ಹ ಕಾನೂನು ಪದವೀಧರರು ನೇರವಾಗಿ ಸಮಿತಿಯ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಚ್.ಸಿ.ಶ್ಯಾಮ್ ಪ್ರಸಾದ್ ತಿಳಿಸಿದ್ದಾರೆ.