ಸುಂಟಿಕೊಪ್ಪ ಡಿ.12 : ಬಾಲ ಪ್ರತಿಭೆ ಶ್ರೀಶಾ ಮತ್ತು ಅವರ ಪೋಷಕರು ಯೋಧರನ್ನು ಸ್ಮರಿಸುವುದರೊಂದಿಗೆ ಮತ್ತೆ ‘ಹುಟ್ಟಿ ಬನ್ನಿ ಯೋಧರೆ’ ಎಂಬ ಕಾರ್ಯಕ್ರಮದಲ್ಲಿ ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಅವರ ಪುಣ್ಯಸ್ಮರಣೆ ಆಚರಿಸಲಾಯಿತು.
ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಪಿನ್ ರಾವತ್ ಮತ್ತು ಹುತಾತ್ಮ ವೀರ ಯೋಧರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಬಾಲ ಪ್ರತಿಭೆ ಶ್ರೀಶಾ, ತಮಿಳುನಾಡಿನ ಕುನೂರು ಬಳಿ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಇತರ ಸೇನಾಧಿಕಾರಿಗಳ ಸಾಧನೆಯನ್ನು ಮೆಲುಕು ಹಾಕಿದರು.
ಬಿಪಿನ್ ರಾವತ್ ಅವರ ವಿದ್ಯಾಭ್ಯಾಸ, ಸೇನೆಯಲ್ಲಿ ಅವರ ಶೌರ್ಯ, ಸಾಹಸಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದಲ್ಲದೇ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಅವರ ಬಗ್ಗೆ ಮಾಹಿತಿ ನೀಡಿದರು.
ಶ್ರೀಶಾ ಅವರ ಪೋಷಕರಾದ ಶಿಜು, ಸಂಧ್ಯಾ, ಸಪಾಯಿ ಕರ್ಮಚಾರಿ ಜಿಲ್ಲಾಧ್ಯಕ್ಷ ಆರ್.ರಂಗಸ್ವಾಮಿ, ಹರದೂರು ಗ್ರಾ.ಪಂ ಸದಸ್ಯ ಬಿ.ಡಿ.ಪದ್ಮನಾಭ, ಕೊಡಗು ಮೀಡಿಯಾದ ಸಿಬ್ಬಂದಿ ಕಾರ್ತಿಕ್, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಹಾಜರಿದ್ದರು.