ಮಡಿಕೇರಿ ಡಿ.12 : ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯನ್ನು ನಡೆಸದೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಗೆ ದಿನಾಂಕ ನಿಗಧಿ ಪಡಿಸಿದ್ದು, ಇದು ನಿಯಮ ಬಾಹಿರ ಕ್ರಮವೆಂದು ಆರೋಪಿಸಿ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ.ಪಂ ಸದಸ್ಯರುಗಳು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ.ಪಂ ಯ 11 ಸದಸ್ಯರುಗಳ ಸಹಿ ಇರುವ ಮನವಿ ಪತ್ರವನ್ನು ಸದಸ್ಯರುಗಳಾದ ಪಿ.ಕೆ.ಚಂದ್ರು, ಬಿ.ಆರ್.ಶುಭಕರ, ಬಿ.ಆರ್.ಮಹೇಶ್ ಹಾಗೂ ಬಿ.ಆರ್.ಮೃತ್ಯುಂಜಯ ನೀಡಿದರು.
2023 ಸೆ.13 ರಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ ಆಡಳಿತಾಧಿಕಾರಿಗಳಾದ ತಾಲ್ಲೂಕು ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಪ.ಪಂ ಸಭಾಂಗಣದಲ್ಲಿ ನಡೆದಿತ್ತು. ಈ ಸಭೆಯಲ್ಲಿ ಪಟ್ಟಣದ ವಾಣಿಜ್ಯ ಮಳಿಗೆಗಳ ಹರಾಜಿಗೆ ಸಂಬಂಧಿಸಿದಂತೆ ಸುಧೀರ್ಘ ಚರ್ಚೆ ನಡೆಸಲಾಯಿತು. ಸದ್ರಿ ವ್ಯಾಪಾರಸ್ಥರ ಹಾಗೂ ಪಟ್ಟಣದ ಅಭಿವೃದ್ಧಿಯ ದೃಷ್ಟಿಯಿಂದ ಹಾಲಿ ವ್ಯಾಪಾರ ಮಾಡುತ್ತಿರುವವರನ್ನೇ ಕೆಲವೊಂದು ಷರತ್ತುಗಳನ್ನು ವಿಧಿಸಿ ಮುಂದುವರೆಸುವ ಸರ್ಕಾರಕ್ಕೆ ಪತ್ರ ಬರೆದು ಅಭಿಪ್ರಾಯ ಕೋರುವಂತೆ ತೀರ್ಮಾನಿಸಲಾಗಿತ್ತು. ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚೆ ನಡೆಸುವಂತೆ ನಿರ್ಧಾರ ಕೈಗೊಳ್ಳಲಾಗಿತ್ತು.
ಆದರೆ ಅಧಿಕಾರಿಗಳು ಇತ್ತೀಚೆಗೆ ಮಳಿಗೆಗಳ ಹರಾಜು ಪ್ರಕಟಣೆ ನೀಡಿದ್ದಾರೆ. ಅಂದಿನ ಸಾಮಾನ್ಯ ಸಭೆಯಲ್ಲಿ ನಾವುಗಳು ಹರಾಜು ನಡೆಸುವಂತೆ ನಿರ್ಣಯ ಮಾಡಿರುವುದಿಲ್ಲ. ಮತ್ತೊಮ್ಮೆ ಸಾಮಾನ್ಯ ಸಭೆ ನಡೆಸದೆ ಅಧಿಕಾರಿಗಳೇ ಏಕಮುಖವಾಗಿ ಹರಾಜು ನಡೆಸುವ ನಿರ್ಣಯ ದಾಖಲಿಸಿದ್ದಾರೆ ಎಂದು ಸದಸ್ಯರು ಆರೋಪಿಸಿದರು.
ನ.17 ಮತ್ತು 22ರಂದು ಸಭೆ ಕರೆದು ವಿನಾಕಾರಣ ಮುಂದೂಡಿರುತ್ತಾರೆ. ಇದರಿಂದಾಗಿ ತಪ್ಪಾಗಿ ನಮೂದಿಸಿರುವ ನಿರ್ಣಯದ ಬಗ್ಗೆ ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಸಿಕ್ಕಿರುವುದಿಲ್ಲ. ಇದೀಗ ಹರಾಜು ಪ್ರಕ್ರಿಯೆಗೆ ಮುಂದಾಗಿರುವುದರಿಂದ ಸಾರ್ವಜನಿಕ ವಲಯದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರ ಬಗ್ಗೆ ತಪ್ಪು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದ್ದರಿಂದ ಆ ನಿರ್ಣಯವನ್ನು ರದ್ದುಪಡಿಸಿ, ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಮತ್ತು ತಕ್ಷಣ ಸಾಮಾನ್ಯ ಸಭೆ ಕರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.









