ಮಡಿಕೇರಿ ಡಿ.14 : ವಿರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ “ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಬೆಳೆಸಿ” ಎಂಬ ಘೋಷವಾಕ್ಯದೊಂದಿಗೆ ವಿರಾಜಪೇಟೆ ನಗರದಲ್ಲಿ ಮಹಿಳಾ ಜಾಗೃತಿ ಅಭಿಯಾನ ನಡೆಯಿತು.
ವಿರಾಜಪೇಟೆ ಚೌಕಿಯಲ್ಲಿ “ಬೇಟಿ ಬಚಾವ್ ಬೇಟಿ ಪಡಾವ್” ಎಂಬುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭ ಪಶು ವೈದ್ಯಾಧಿಕಾರಿ ಡಾ.ರಾಕೇಶ್ ಮಾತನಾಡಿ, ಹೆಣ್ಣು ಮಕ್ಕಳು ಮನೆಯಲ್ಲಿ ಕೆಲಸ ಮಾಡಲು ಮಾತ್ರ ಸೀಮಿತವಲ್ಲ, ಇಂದು ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಿದ್ದಾರೆ ಎಂದರು.
ಗಡಿಯಾರ ಕಂಬದ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿರಾಜಪೇಟೆ ಪುರಸಭೆ ಸದಸ್ಯ ಮೊಹಮದ್ ರಾಫಿ, ಹೆಣ್ಣು ಮಕ್ಕಳ ಮೇಲಿನ ಶೋಷಣೆ ನಿಲ್ಲಬೇಕು, ಶಿಕ್ಷಣವನ್ನು ನೀಡಿ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದರು.
ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಅಭಿಯಾನದಲ್ಲಿ ಮಾತನಾಡಿದ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಗೀತಾ, ಹೆಣ್ಣು ಮಕ್ಕಳ ಸ್ವರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು. ಪೊಲೀಸ್ ಠಾಣೆಯ ಸಹಾಯಕ ದೂರವಾಣಿ ಸಂಖ್ಯೆಯಾದ 112 ಗೆ ಕರೆ ಮಾಡಿ ಅಪರಾಧ ತಡೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಲಿಟಲ್ ಸ್ಕಾಲರ್ಸ್ ಸಂಸ್ಥೆಯ ಮುಖ್ಯಸ್ಥೆ ಹಾಗೂ ಉದ್ಯಮಿ ಪೂಜಾ ರವೀಂದ್ರ ಮಾತನಾಡಿ, ನಮ್ಮ ವಿದ್ಯಾಸಂಸ್ಥೆಯಿಂದ ಹತ್ತು ಹಲವು ಕಾರ್ಯಕ್ರಮ ನಡೆಸುತ್ತಿದ್ದು, ಇದು ವಿನೂತನ ಅಭಿಯಾನವಾಗಿದೆ ಎಂದರು.
ಮಹಿಳಾ ಸಬಲೀಕರಣದ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆನ್ನುವುದೇ ನಮ್ಮ ಗುರಿಯಾಗಿದೆ ಎಂದರು.
ಇದೇ ಸಂದರ್ಭ ಸಾರ್ವಜನಿಕರಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಮಾಹಿತಿಯನ್ನು ನೀಡಲಾಯಿತು ಮತ್ತು ಅರ್ಜಿಗಳನ್ನು ವಿತರಿಸಲಾಯಿತು. ಲಿಟಲ್ ಸ್ಕಾಲರ್ಸ್ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.