ಪುತ್ತೂರು ಡಿ.19 : ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಬಾಷೆಯು ಪ್ರಾಚೀನವಾದದ್ದು, 12 ನೇ ಶತಮಾನದ ಶಿಲಾ ಶಾಸನಗಳನ್ನು ಅಧ್ಯಯನ ಮಾಡಿದಾಗ ಇದರ ಬಗ್ಗೆ ವಿವರಗಳು ಸಿಗುತ್ತವೆ ಎಂದು ಜೈ ತುಳುನಾಡು ಕಾಸರಗೋಡು ವಿಭಾಗದ ಅಧ್ಯಕ್ಷೆ ಕುಶಾಲಾಕ್ಷಿ ವಿ ಕುಲಾಲ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಹಾಗೂ ವಿದ್ಯಾಭಾರತಿ ಉಚ್ಚ ಶಿಕ್ಷಣ ಸಂಸ್ಥಾನ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ನಡೆದ ಭಾರತೀಯ ಭಾಷಾ ಉತ್ಸವ ಕಾರ್ಯಕ್ರಮದಲ್ಲಿ ತುಳು ಭಾಷೆ ಮತ್ತು ಸಾಹಿತ್ಯ ಈ ವಿಷಯದ ಬಗ್ಗೆ ಮಾತಾಡಿದರು. ತಾಯಿ ಭಾಷೆಯಲ್ಲಿ ಸಂವಹನ ಮಾಡುವುದು ಅತ್ಯಂತ ಆನಂದದಾಯಕವಾದದ್ದು, ಹೀಗಾಗಿ ತಾಯಿ ಭಾಷೆ, ತಾಯ್ನೆಲದ ಬಗ್ಗೆ ವಿಶೇಷ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು. ಪುರಾತನ ತುಳುವ ಆಚರಣೆಗಳು, ತರವಾಡು ಮನೆತನ, ದೇವಾಲಯ, ದೈವಾಲಯ, ನಾಗಾಲಯಗಳಲ್ಲಿ ನಡೆಯುವ ಆಚರಣೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಇದರ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಹೊಂದುವ ಪ್ರಯತ್ನವನ್ನು ಯುವಜನತೆ ಮಾಡಬೇಕು ಎಂದರು. ತುಳು ಬ್ರಹ್ಮ ವೆಂಕಟ್ರಾಜ ಪುಣಿಚಿತ್ತಾಯರು ತುಳು ಲಿಪಿಗೆ ಒಂದು ಚೌಕಟ್ಟನ್ನು ನಿರ್ಮಾಣ ಮಾಡಿಕೊಟ್ಟರು ಈ ಲಿಪಯನ್ನು ಕಲಿತು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕಿದೆ ಎಂದು ನುಡಿದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ ವಿವೇಕಾನಂದ ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಶೋಭಿತಾ ಸತೀಶ್ ಮಾತನಾಡಿ ಮನಸ್ಸಿನ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಕ್ಕೆ, ಬರೆಯುವುದಕ್ಕೆ, ಓದುವುದಕ್ಕೆ, ಸಂವಹನಕ್ಕೆ ಭಾಷೆ ಅಗತ್ಯ. ಭಾಷೆಯಲ್ಲಿ ಪಕ್ವತೆ, ಸ್ಪಷ್ಟತೆ ಮತ್ತು ಶಬ್ದ ಭಂಡಾರವನ್ನು ಹೊಂದಿರುವವರು ಆ ಭಾಷೆಯ ಮೇಲೆ ಹಿಡಿತ ಸಾಧಿಸುತ್ತಾರೆ ಎಂದರು. ಯಾವುದೇ ವಿಷಯದ ಬಗ್ಗೆ ಆಸಕ್ತಿ, ಏಕಾಗ್ರತೆ ಮತ್ತು ಸೃಜನಶೀಲತೆಯನ್ನು ಬೆಳೆಸಿಕೊಂಡಾಗ ನಮಗೆ ಅದರಲ್ಲಿ ವಿಶ್ವಾಸ ಹೆಚ್ಚಾಗುತ್ತದೆ ಆ ವಿಶ್ವಾಸ ಜೀವನದಲ್ಲಿ ನಮ್ಮನ್ನು ಮುನ್ನಡೆಸುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಟಿ.ಎಸ್.ಸುಬ್ರಮಣ್ಯ ಭಟ್ ಮಾತನಾಡಿ ಭಾಷೆಯನ್ನು ಉಳಿಸಿ ಬೆಳೆಸುವುದಕ್ಕೆ ನಾವು ಮನೆಯಲ್ಲಿ ಅದೇ ಭಾಷೆಯಲ್ಲಿ ಸಂವಹನ ಮಾಡಬೇಕು ಆದರೆ ಇತರ ಭಾಷೆಗಳ ಬಗ್ಗೆ ಅಸಡ್ಡೆ ಸಲ್ಲದು ಎಂದರು. ನಾಟಕಗಳು, ಯಕ್ಷಗಾನಗಳು, ಸಾಂಸ್ಕೃತಿಕ ಚಟುವಟಿಕೆಗಳು ಭಾಷೆಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತವೆ ಎಂದರು.
ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಪ್ರೊ.ಮಹಾಬಲೇಶ್ವರ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು, ಸಾತ್ವಿಕ್.ವಿ.ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಸಹ ಸಂಯೋಜಕಿ ಪ್ರೊ.ನಿರುಪಮಾ ವಂದಿಸಿದರು. ಪ್ರತಿಕ್ಷಾ.ಬಿ.ಸಿ ಕಾರ್ಯಕ್ರಮ ನಿರ್ವಹಿಸಿದರು.