ಮಡಿಕೇರಿ ಡಿ.22 : ಕೊಡಗು ಗೌಡ ಯುವ ವೇದಿಕೆ ವತಿಯಿಂದ 2ನೇ ಅವಧಿಯ ಗೌಡ ಕ್ರಿಕೆಟ್ ಟಿ-10 ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು 2024ರ ಏಪ್ರಿಲ್‍ನಲ್ಲಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆಯ ಸಹ ಕಾರ್ಯದರ್ಶಿ ಕಾಂಚನ ಗೌಡ ಕೆದಂಬಾಡಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕಳೆದ ಸಾಲಿನ ಪಂದ್ಯಾವಳಿಯಲ್ಲಿ 8 ಫ್ರಾಂಚೈಸಿ ತಂಡಗಳು ಪಾಲ್ಗೊಂಡಿದ್ದು, ಈ ಬಾರಿ 12 ಫ್ರಾಂಚೈಸಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಫ್ರ್ರಾಂಚೈಸಿ ಖರೀದಿಲು ಇಚ್ಛಿಸುವವರು ಡಿ.28ರ ಸಂಜೆ 6 ಗಂಟೆಯ ಒಳಗೆ ವೇದಿಕೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳುವ ಇಚ್ಛಿಸುವ ಕ್ರಿಕೆಟ್ ಪಟುಗಳಿಗೆ ಸಂಬಂಧ ಪಟ್ಟ ಅರ್ಜಿಗಳು ಇಂದಿನಿಂದಲೆ ಲಭ್ಯವಾಗಲಿದೆ. ಅರ್ಜಿಗಳನ್ನು ಆನ್ ಲೈನ್ ಮತ್ತು ಆಫ್ ಲೈನ್‍ನಲ್ಲಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದ್ದು, ಅರ್ಜಿಗಳನ್ನು ಜ.18ರ ಸಂಜೆ 6 ಗಂಟೆಯ ಒಳಗೆ ಸಲ್ಲಿಸಬೇಕೆಂದು ಸ್ಪಷ್ಟಪಡಿಸಿದರು.
ಪಂದ್ಯಾವಳಿ ವಿಜೇತ ತಂಡಕ್ಕೆ ಈ ಬಾರಿ ಮೊದಲ ಬಹುಮಾನವಾಗಿ 1,11,111 ರೂ. ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ 77,777 ರೂ. ಹಾಗೂ ಆಕರ್ಷಕ ಟ್ರೋಫಿ, ತೃತೀಯ 44,444 ರೂ. ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ ತಿಳಿಸಿದರು.

::: ಕೋಟಿ ಅನುದಾನಕ್ಕೆ ಮನವಿ :::
ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಮಾತನಾಡಿ, ಗೌಡ ಜನಾಂಗ ಕೊಡಗಿನಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ಜನಾಂಗವಾಗಿದೆ. ಜನಾಂಗದ ಪ್ರತಿಭಾವಂತ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಕ್ರೀಡಾಕೂಟ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆದ್ದರಿಂದ ಕೊಡಗು ಗೌಡ ಯುವ ವೇದಿಕೆಗೆ ಸರ್ಕಾರ 1 ಕೋಟಿ ರೂ.ಗಳಷ್ಟು ಅನುದಾನ ಒದಗಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಶಾಸಕರು ಆಸಕ್ತಿ ತೋರಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪಂದ್ಯಾವಳಿಯ ಬಗ್ಗೆ ಹೆಚ್ಚಿನ ಮಾಹಿತಿಗೆ 9972376151, 9980004374, 9008198955 ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆ ಕ್ರೀಡಾಧ್ಯಕ್ಷ ಬಾಲಡಿ ಮನೋಜ್ ಕುಮಾರ್, ವೇದಿಕೆಯ ಕೋಶಾಧಿಕಾರಿ ಕುಕ್ಕೇರ ಜಯ ಲಕ್ಷ್ಮಣ್, ಆಹಾರ ಸಮಿತಿ ಅಧ್ಯಕ್ಷ ಪರ್ಚನ ಸತೀಶ್ ತಿಮ್ಮಯ್ಯ ಹಾಗೂ ವೇದಿಕೆಯ ಸದಸ್ಯ ದಿಶಾಂತ್ ಕೋಚನ ಉಪಸ್ಥಿತರಿದ್ದರು.








