ಮಡಿಕೇರಿ ಡಿ.22 : ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಎನ್.ಎಸ್.ಎಸ್. ಹಾಗೂ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಕಾಲೇಜಿನಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಯಿತು.
ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಘಟಕದ ಆಪ್ತ ಸಮಾಲೋಚಕ ಚಿಟ್ಟಿಯಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಏಡ್ಸ್ ಅರಿವು ಮೂಡಿಸಿ ಮಾತನಾಡಿ ವಿದ್ಯಾರ್ಥಿಗಳು ಆರೋಗ್ಯ ಜಾಗೃತಿ ಹೊಂದಿರಬೇಕು. ಏಡ್ಸ್ ಹರಡದಂತೆ ಪ್ರತಿಯೊಬ್ಬರು ಮುನ್ನೆಚ್ಚರಿಕೆಯನ್ನು ವಹಿಸಬೇಕು. ಸಮಾಜದಲ್ಲಿ ಅರಿವನ್ನು ಮೂಡಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದರು. ಮತ್ತು ಎಚ್.ಐ.ವಿ. ಹರಡುವ ಬಗ್ಗೆ ಮತ್ತು ನಿಯಂತ್ರಣ ಕ್ರಮದ ವಿವರಿಸಿದರು.
ಪದವಿ ಕಾಲೇಜು ಪ್ರಾಂಶುಪಾಲರಾದ ಡಾ. ಆನಂದ್ ಕಾರ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಪ್ರತಿಯೊಬ್ಬರು ಸಂಸ್ಕೃತಿಯನ್ನು ಗೌರವಿಸಬೇಕು. ಸಂಸ್ಕೃತಿಯನ್ನು ಪಾಲಿಸುದರಿಂದ ಕಾಯಿಲೆಗಳು ಹರಡುವುದು ನಿಲ್ಲುತ್ತದೆ. ರಕ್ತದಾನವನ್ನು ಮಾಡುವುದರಿಂದ ಒಂದು ಜೀವವನ್ನು ಉಳಿಸಿದ ಸೌಭಾಗ್ಯ ನಮ್ಮದಾಗುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.ವೇದಿಕೆಯಲ್ಲಿ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಸುನಿಲ್ ಕುಮಾರ್ ಬಿ.ಬಿ., ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಸಂಚಾಲಕಿ ಅಂಬಿಕಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಶ್ವ ಏಡ್ಸ್ ದಿನದ ಕುರಿತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.









