ಕುಶಾಲನಗರ ಡಿ.22 : ಕುಶಾಲನಗರ ಸಮೀಪ ಚಿಕ್ಕ ಅಳುವಾರದಲ್ಲಿರುವ ಕೊಡಗು ವಿವಿ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳ ಸೇವೆಯನ್ನು ಮುಂದುವರೆಸಲು ಒತ್ತಾಯಿಸಿ ಕಳೆದ 11 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ತೊರೆನೂರು ಗ್ರಾಪಂ ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಮಂಗಳೂರು ವಿವಿ ಅಧೀನದಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭವಾದಾಗಿನಿಂದಲೂ ಸೇವೆಯಲ್ಲಿದ್ದ 24 ಮಂದಿ ಸಿಬ್ಬಂದಿಗಳನ್ನು ಸೇವೆಯಿಂದ ಕೈಬಿಡಲಾಗಿದೆ. ಇದರಿಂದಾಗಿ ನಮ್ಮ ಜೀವನ ಅತಂತ್ರವಾಗಿದೆ ಎಂದು ಸಿಬ್ಬಂದಿಗಳು ಕೇಂದ್ರದ ಹೊರ ಆವರಣದಲ್ಲಿ ಪ್ರತಿಭಟಿಸುತ್ತಿದ್ದು ಇವರ ಹೋರಾಟದಲ್ಲಿ ಕರ್ನಾಟಕ ಕಾವಲುಪಡೆ, ದಲಿತ ಹಿತರಕ್ಷಣಾ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ.
44 ಮಂದಿ ಬೋಧಕೇತರ ಸಿಬ್ಬಂದಿಗಳ ಪೈಕಿ 18 ಮಂದಿಯನ್ನು ಮಾತ್ರ ಸೇವೆಯಲ್ಲಿ ಮುಂದುವರೆಸಿದ್ದು ಕಳೆದ 8-10 ವರ್ಷಗಳಿಂದ ಕೇಂದ್ರದ ಅಭಿವೃದ್ಧಿಗೆ ಶ್ರಮಿಸಿದ, ಎಲ್ಲಾ ಅರ್ಹತೆ ಹೊಂದಿರುವ ಇತರೆ ಸಿಬ್ಬಂದಿಗಳನ್ನು ಕೈಬಿಡಲಾಗಿದೆ. ಮುಂದಿನ ದಿನಗಳಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ ಪ್ರತಿಭಟನಾ ನಿರತರಾದ ಸವಿತಾ ರಾಣಿ, ಕೆ.ಜೆ.ಹರೀಶ್, ಎ.ಆರ್.ಗಣೇಶ್, ಯೋಗೇಶ್ ಮತ್ತಿತರರು ಕುಲಸಚಿವರು ಹಾಗೂ ಕೇಂದ್ರದ ನಿರ್ದೇಶಕರ ವಿರುದ್ದ ಧಿಕ್ಕಾರ ಕೂಗಿದರು.
ಈ ಸಂದರ್ಭ ಸ್ಥಳಕ್ಕೆ ತೆರಳಿದ ಸುದ್ದಿಗಾರರೊಂದಿಗೆ ಮಾತನಾಡಿದ ತೊರೆನೂರು ಗ್ರಾಪಂ ಉಪಾಧ್ಯಕ್ಷೆ ರೂಪಾ ಮಹೇಶ್, ಕೇಂದ್ರದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕಿದೆ. ಆದರೆ ಇಲ್ಲಿ ಸ್ಥಳೀಯರನ್ನು ಕಡೆಗಣಿಸಿರುವುದು ಖಂಡನೀಯ. ಶೀಘ್ರದಲ್ಲೇ ಸಂಬಂಧಿಸಿದವರು ಹೋರಾಟಗಾರರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಿದೆ ಎಂದರು.
ಹೋರಾಟದ ನೇತೃತ್ವ ವಹಿಸಿರುವ ಸವಿತಾ ರಾಣಿ ಅವರು ಮಾತನಾಡಿ, ವಿಶ್ವವಿದ್ಯಾಲಯದ ಅಧಿಕಾರಿಗಳು ಸುಳ್ಳು ಭರವಸೆಗಳನ್ನು ನೀಡುತ್ತಿದ್ದು ನ್ಯಾಯ ದೊರಕುವ ತನಕ ಹೋರಾಟ ನಡೆಸುವುದಾಗಿ ತಿಳಿಸಿದರು.
ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ದಲಿತ ಹಿತರಕ್ಷಣಾ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ಹೊನ್ನಪ್ಪ ಮಾತನಾಡಿ, ವಜಾಗೊಂಡಿರುವ ಸಿಬ್ಬಂದಿಗಳನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳುವವರೆಗೆ ಸಂಘಟನೆಗಳು ಸಿಬ್ಬಂದಿಗಳ ಹೋರಾಟಕ್ಕೆ ಸಹಕಾರ ನೀಡಲಿದೆ. ಡಿಸೆಂಬರ್ 26ರಂದು ಬೃಹತ್ ಸಂಖ್ಯೆಯಲ್ಲಿ ಸೇರಿ ಪ್ರತಿಭಟನಾಕಾರದೊಂದಿಗೆ ವಿಶ್ವವಿದ್ಯಾಲಯ ಆವರಣದಲ್ಲಿ ತೆರಳಿ ನ್ಯಾಯ ಕೋರಲಾಗುವುದು ಎಂದು ತಿಳಿಸಿದ್ದಾರೆ. ಹೋರಾಟಗಾರರನ್ನು ಹತ್ತಿಕ್ಕಲು ಪ್ರಯತ್ನಿಸಿ ನಿಂದಿಸಿರುವ ಅಧಿಕಾರಿ ವಿರುದ್ದ ಕ್ರಮಕ್ಕೆ ಪೊಲೀಸರನ್ನು ಆಗ್ರಹಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ತೊರೆನೂರು ಗ್ರಾಪಂ ಅಧ್ಯಕ್ಷೆ ಶೋಭಾ ಪ್ರಕಾಶ್, ಸದಸ್ಯರಾದ ಕೆ.ಬಿ.ದೇವರಾಜ್, ಶಿವಕುಮಾರ್, ಮಹದೇವ್, ತೀರ್ಥಾನಂದ, ದಲಿತ ಹಿತರಕ್ಷಣಾ ಒಕ್ಕೂಟದ ಜಿಲ್ಲಾಧ್ಯಕ್ಷ ಡಿ.ಎಸ್.ನಿರ್ವಾಣಪ್ಪ, ಉಪಾಧ್ಯಕ್ಷರಾದ ಎಂ.ಪಿ ಹೊನ್ನಪ್ಪ, ಮಂಜುನಾಥ್, ಸಣ್ಣಪ್ಪ, ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ಹಸಿರು ಸೇನೆ ಜಿಲ್ಲಾಧ್ಯಕ್ಷ ಶರತ್ ಮತ್ತಿತರರು ಪಾಲ್ಗೊಂಡಿದ್ದರು.








