ವಿರಾಜಪೇಟೆ ಡಿ.23 : ತಿತಿಮತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ವಿರಾಜಪೇಟೆ ನಗರ ಪೋಲಿಸ್ ಠಾಣೆ ಸಂಯುಕ್ತಾಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ತಿತಿಮತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ಕ್ರೈಂ ಬ್ರಾಂಚ್‍ನ ಎಎಸ್‍ಐ ಗಣಪತಿ ಮಾತನಾಡಿ, ಮಕ್ಕಳಿಗೆ ಅಪಘಾತ ಮತ್ತು ಸುರಕ್ಷತೆ, ಅಪರಾಧ ತಡೆ ಮತ್ತು ಅದರ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರು ಯಾವುದೇ ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಬಾರದು, ಚಿಕ್ಕ ಮಕ್ಕಳಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಬಾರದು ಹಾಗೂ ದೊಡ್ಡವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ದ್ವಿಚಕ್ರ ಚಾಲನೆ ಮಾಡಬೇಕು, ನಾಲ್ಕು ಚಕ್ರ ವಾಹನಗಳನ್ನು ಓಡಿಸಲು ಡಿಎಲ್, ಇನ್ಸೂರೆನ್ಸ್ ಹೊಂದಿರುವುದು ಕಡ್ಡಾಯ ಎಂದು ಮನವಿ ಮಾಡಿದರು.
ಕಾಲಕ್ಕೆ ತಕ್ಕಂತೆ ಅಪರಾಧಗಳ ಶೈಲಿಯೂ ಬದಲಾಗುತ್ತಿದೆ. ಸೈಬರ್ ಅಪರಾಧ, ದರೋಡೆ, ಮನೆ ಕಳ್ಳತನ, ಮಾದಕ ವಸ್ತುಗಳ ಸಾಗಾಣಿಕೆ, ಮಾನವ ಕಳ್ಳ ಸಾಗಾಣಿಕೆ ಸೇರಿದಂತೆ ಅನೇಕ ಅಪರಾಧಗಳು ಯಥೇಚ್ಛವಾಗಿ ದಾಖಲಾಗುತ್ತಿದ್ದು, ಜನರು ಈ ವಿಷಯಗಳಲ್ಲಿ ಸಾಕಷ್ಟು ಜಾಗರೂಕರಾಗಬೇಕಿದೆ ಎಂದರು.
ಪೋಲಿಸ್ ಸಿಬ್ಬಂದಿ ಕಿರಣ್ ಕುಮಾರ್ ಅಪರಾಧ ಮತ್ತು ಕಾನೂನು ಅರಿವು ಕುರಿತು ಮಾಹಿತಿ ನೀಡಿ ಮಾತನಾಡಿ, ಜನರಲ್ಲಿ ಅಪರಾಧ ತಡೆ ಬಗ್ಗೆ ಮಾಹಿತಿ ನೀಡಲು ಈ ಕಾರ್ಯಕ್ರಮ ಉತ್ತಮ ವೇದಿಕೆ. ಸಾರ್ವಜನಿಕರ ಸಹಕಾರವಿಲ್ಲದೆ ಪೊಲೀಸ್ ಇಲಾಖೆ ಕೆಲಸ ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ಜನತೆ ಪೊಲೀಸರ ಜೊತೆಗೆ ಕೈಜೋಡಿಸಿ ಅಪರಾಧ ತಡೆಯುವಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಸತಿ ಶಾಲೆಯ ಪ್ರಾಂಶುಪಾಲರಾದ ಷಡಾಕ್ಷರಿ, ಮಕ್ಕಳಿಗೆ ಸಮಾಜದಲ್ಲಿ ಉತ್ತಮ ನಾಗರೀಕರಿಗೆ ಸಿಗುವ ಗೌರವ ಹಾಗೂ ಇಂದಿನ ಸಮಾಜದಲ್ಲಿ ಮಕ್ಕಳಿಗೆ ಕಾನೂನಿನ ಅರಿವಿದ್ದರೆ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಸುಬ್ರಮಣಿ ಸೇರಿದಂತೆ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ವರ್ಗದವರು ಹಾಜರಿದ್ದರು.










