ಮಡಿಕೇರಿ ಡಿ.24: ಅಕ್ರಮ ಸಕ್ರಮ ಸಮಿತಿ ಮತ್ತು ಅಕಾಡೆಮಿಗಳ ಅಧ್ಯಕ್ಷರುಗಳ ನೇಮಕ ಪ್ರಕ್ರಿಯೆಗಳನ್ನು ಶೀಘ್ರದಲ್ಲೇ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹೇಳಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ಅಕ್ರಮ ಸಕ್ರಮ ಸಮಿತಿ ನೇಮಕದ ಕುರಿತು ಸರ್ಕಾರ ಉತ್ಸುಕವಾಗಿದೆ. ಹಿರಿಯ ನಾಯಕರೊಂದಿಗೆ ಚರ್ಚಿಸಿ ಮತ್ತು ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಂಡು ನೇಮಕಾತಿ ಮಾಡಲಾಗುತ್ತದೆ. ಬಳಿಕ ಫಾರಂ ನಂಬರ್ 53 ಮತ್ತು 57ಅನ್ನು ಕಾನೂನು ಪ್ರಕಾರ ವಿಲೇವಾರಿ ಮಾಡಲಾಗುತ್ತದೆ ಎಂದು ಹೇಳಿದರು.
ಉನ್ನತ ಮಟ್ಟದ ಸಮಿತಿಯೊಂದಿಗೆ ಚರ್ಚಿಸಿ ಅಕಾಡೆಮಿಗಳಿಗೆ ಅಧ್ಯಕ್ಷರುಗಳ ನೇಮಕವಾಗಲಿದೆ. ಎಲ್ಲ ಪ್ರಕ್ರಿಯೆಗಳು ಶೀಘ್ರದಲ್ಲೇ ಪೂರ್ಣವಾಗಲಿದೆ ಎಂದರು.
::: ಕಾರಣಕರ್ತರಿಗೆ ಶಿಕ್ಷೆಯಾಗಲಿ :::
ತಾನು ದೇಶ ದ್ರೋಹಿಯೋ ದೇಶ ಪ್ರೇಮಿಯೋ ಎಂದು ಜನರೇ ಉತ್ತರ ನೀಡುತ್ತಾರೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಪೊನ್ನಣ್ಣ, ಸಂಸದರು ಚುನಾವಣೆ ನಿಲ್ಲುತ್ತಾರೋ ಬಿಡುತ್ತಾರೋ ಗೊತ್ತಿಲ್ಲ, ಅದನ್ನು ಅವರ ಪಕ್ಷವೇ ನಿರ್ಧರಿಸುತ್ತದೆ. ಸಂಸತ್ ಘಟನೆ ಚುನಾವಣೆಗೆ ಸಂಬAಧಿಸಿದ ವಿಚಾರ ಅಲ್ಲ. ಸಂಸತ್ ಮೇಲಾದ ಘಟನೆಯನ್ನು ತಳ್ಳಿ ಹಾಕುವಂತಿಲ್ಲ. ಪ್ರಜಾಪ್ರಭುತ್ವದ ಮೇಲೆ ಹಲ್ಲೆ ನಡೆದಿದ್ದು, ಈ ಲೋಪಕ್ಕೆ ಕಾರಣಕರ್ತರಾದವರು ಯಾರು ಎಂದು ಪ್ರಶ್ನಿಸಿದರು.
ಈ ಪ್ರಕರಣದ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ ಪೊನ್ನಣ್ಣ, ತನಿಖೆಯನ್ನು ಸಂಸದರು ಸ್ವಾಗತಿಸಬೇಕು ಮತ್ತು ಅವರೂ ತನಿಖೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಇದು ದೇಶದ ಭದ್ರತೆಯ ಪ್ರಶ್ನೆಯಾಗಿದ್ದು, ಇದಕ್ಕೆ ಯಾರೇ ಕಾರಣಕರ್ತರಾದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ತಿಳಿಸಿದರು.










