ಮಡಿಕೇರಿ ಡಿ.24 : ಕೊಡಗಿಗೆ ಆಗಮಿಸುವ ಪ್ರವಾಸಿಗರು ಕೇವಲ ಕೊಡಗಿನ ಪರಿಸರವನ್ನು ನೋಡಿ ಆನಂದಿಸಿ ಮರಳಿದರೇ ಸಾಲದು. ಕೊಡಗಿನ ಮೂಲ ನಿವಾಸಿಗಳಾದ ಕೊಡವರು ಯಾರು, ದೇಶ ಮತ್ತು ರಾಜ್ಯಕ್ಕೆ ಕೊಡವರ ಕೊಡುಗೆಗಳೇನು ಎನ್ನುವ ಬಗ್ಗೆ ತಿಳಿಸಬೇಕು. ಕೊಡವರ ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಸಲಹೆ ನೀಡಿದ್ದಾರೆ.
ಮಡಿಕೇರಿ ಕೊಡವ ಸಮಾಜದ ವತಿಯಿಂದ ನಡೆದ ಪುತ್ತರಿ ಊರೊರ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಪೊನ್ನಣ್ಣ ಅವರು, ಕೊಡಗಿಗೆ ಬರುವ ಪ್ರವಾಸಿಗರಿಗೆ ಕೊಡವ ಸಮುದಾಯದ ಬಗ್ಗೆ ಅರಿವು ಮೂಡಿಸುವಂತಹ ಕೆಲಸವಾಗಬೇಕು ಎಂದರು.
ಕೊಡವ ಸಮುದಾಯ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಈ ಸಮುದಾಯದ ಅನೇಕ ಮಂದಿ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ್ದಾರೆ. ಅವರು ತಾಯ್ನಾಡಿಗೆ ಮರಳಿದಾಗ ಅವರುಗಳನ್ನು ಅತಿಥಿಯಂತೆ ಸತ್ಕರಿಸಬೇಕು. ಇದರಿಂದ ಸಮುದಾಯದ ಒಗ್ಗಟ್ಟು ಸಮಾಜದ ಬೆಳವಣಿಗೆಗೂ ಸಹಕಾರಿಯಾಗಲಿದೆ. ಕೊಡವ ಸಮುದಾಯದ ಸಂಸ್ಕೃತಿ, ಆಚಾರ, ವಿಚಾರ, ಪದ್ದತಿ, ಪರಂಪರೆ ಇಡೀ ವಿಶ್ವದಲ್ಲೇ ವಿಶಿಷ್ಟವಾಗಿದೆ. ಇಂತಹ ವೈಶಿಷ್ಟö್ಯಪೂರ್ಣ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಸಮುದಾಯದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಪುಸ್ತಕಗಳು ಹಾಗೂ ಕೊಡವ ಹೆರಿಟೇಜ್ ಸೆಂಟರ್ ಮೂಲಕ ಕೊಡವರ ಬಗ್ಗೆ ಪ್ರವಾಸಿಗರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಎ.ಎಸ್.ಪೊನ್ನಣ್ಣ ಹೇಳಿದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಡವ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ, ಪರಂಪರೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರ ಸಹಕಾರದಿಂದ ಮಡಿಕೇರಿ ಕೊಡವ ಸಮಾಜ ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದೆ. ಸಮಾಜದ ಅಂಗ ಸಂಸ್ಥೆಯಾದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲೂ ಹಲವು ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಮಡಿಕೇರಿ ಕೊಡವ ಸಮಾಜದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಇತರ ಅಭಿವೃದ್ದಿ ಕಾರ್ಯಗಳಿಗೆ ಸರಕಾರದಿಂದ ಅನುದಾನ ದೊರಕಿಸಿಕೊಡುವಂತೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಮಾಜದ ಪರವಾಗಿ ಮನವಿ ಮಾಡಿದರು.
ಪುತ್ತರಿ ಊರೊರ್ಮೆ ಕಾರ್ಯಕ್ರಮದಲ್ಲಿ ದೇಶತಕ್ಕರಾದ ಪಾಂಡೀರ ಕುಟುಂಬದ ಪರವಾಗಿ ಪಾಂಡೀರ ಕಾಳಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಅವರನ್ನು ಸಮಾಜದ ವತಿಯಿಂದ ದುಡಿಕೊಟ್ಟ್ ಪಾಟ್‌ನೊಂದಿಗೆ ಸ್ವಾಗತಿಸಲಾಯಿತು.
ಮಾಜಿ ಎಂಎಲ್‌ಸಿ ಶಾಂತೆಯಂಡ ವೀಣಾ ಅಚ್ಚಯ್ಯ, ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ನಂದಿನೆರವಂಡ ಚೀಯಣ್ಣ, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರಾದ ಕೇಕಡ ವಿಜುದೇವಯ್ಯ, ಕನ್ನಂಡ ಕವಿತಾ ಬೊಳ್ಳಪ್ಪ, ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಪುತ್ತರಿರ ಕರುಣ್ ಕಾಳಯ್ಯ, ನಂದಿನೆರವಂಡ ರವಿ ಬಸಪ್ಪ, ಕಾಳಚಂಡ ಅಪ್ಪಣ್ಣ, ಮೂವೆರ ಜಯರಾಂ, ಬೊಪ್ಪಂಡ ಸರಳಾ ಕರುಂಬಯ್ಯ, ಕಾಂಡೆರ ಲಲ್ಲು ಕುಟ್ಟಪ್ಪ, ಮಡಿಕೇರಿಯ ವಿವಿಧ ಕೇರಿಗಳ ಪದಾಧಿಕಾರಿಗಳು, ಪೊಮ್ಮಕ್ಕಡ ಕೂಟ, ಕನೆಕ್ಟಿಂಗ್ ಕೊಡವ ಸಂಘಟನೆ, ಕೊಡವ ಮಕ್ಕಡ ಕೂಟದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.











