ಮಡಿಕೇರಿ ಡಿ.25 : ಏಸು ಕ್ರಿಸ್ತ ಜನನದ ಸಂಕೇತವಾದ ಕ್ರಿಸ್‍ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಿದರು.
ವಿವಿಧ ಚರ್ಚ್‍ಗಳಲ್ಲಿ ರಾತ್ರಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಏಸು ಧರೆಗಿಳಿದನೆಂದು ಗೋದಲಿಯಲ್ಲಿ ಬಾಲಯೇಸುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯನ್ನು ಮೆರೆದರು.
ಮಡಿಕೇರಿಯ ಸಂತ ಮೈಕಲರ ಚರ್ಚ್‍ನಲ್ಲಿ ಮೈಸೂರಿನ ಸಂತ ಜೋಸೆಫರ ಆಸ್ಪತ್ರೆಯ ನಿರ್ದೇಶಕ ಮನೋಜ್ ಇಮೆನ್ಯುವಲ್ ಡಿಸೋಜಾ ಗೋದಲಿ ಬಾಲ ಏಸುವಿನ ಪ್ರತಿಕೃತಿಯನ್ನಿರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಧರ್ಮಗುರು ಜಾಜ್ ದೀಪಕ್ ಪೂಜೆ ಸಲ್ಲಿಸಿ, ಏಸುವಿನ ಸಂದೇಶವನ್ನು ಸಾರಿದರು.

ವಿಶೇಷ ಪ್ರಾರ್ಥನೆಯಲ್ಲಿ ಸಾವಿರಾರು ಕ್ರೈಸ್ತ ಬಾಂಧವರು ಪಾಲ್ಗೊಂಡು ಮೊಂಬತ್ತಿ ಬೆಳಗಿ, ಸಿಹಿ ಹಂಚಿ ಸಂಭ್ರಮಿಸಿದರು. ಗೋದಲಿಯಲ್ಲಿ ಪ್ರತಿಷ್ಠಾಪಿಸಿದ ಬಾಲಯೇಸುವಿಗೆ ಪುಷ್ಪನಮನ ಸಲ್ಲಿಸಿದರು. ಪ್ರವಾಸಿಗರು ಹಾಗೂ ಇತರ ಧರ್ಮೀಯರು ಕೂಡ ಚರ್ಚ್‍ಗೆ ಭೇಟಿ ನೀಡಿ ಮೊಂಬತ್ತಿ ಬೆಳಗಿ ಕ್ರಿಸ್‍ಮಸ್ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು. ಸುಂಟಿಕೊಪ್ಪ, ಕುಶಾಲನಗರ, ಸೋಮವಾರಪೇಟೆ, ವಿರಾಜಪೇಟೆ, ಗೋಣಿಕೊಪ್ಪ, ಸಿದ್ದಾಪುರ ಸೇರಿದಂತೆ ಎಲ್ಲಾ ಚರ್ಚ್‍ಗಳಲ್ಲಿ ಕ್ರಿಸ್‍ಮಸ್ ಸಡಗರ ಮುಗಿಲು ಮುಟ್ಟಿತ್ತು.
















