ವಿರಾಜಪೇಟೆ ಡಿ, 25 : ವಿರಾಜಪೇಟೆ ಮಲೆತಿರಿಕೆ ಬೆಟ್ಟದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ವಾರ್ಷಿಕ ಮಾಹೋತ್ಸವವು ಡಿ.26 ರಿಂದ ಆರಂಭಗೊಂಡು ಜ.1 ರಂದು ಶ್ರೀ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆಯೊಂದಿಗೆ ಕೊನೆಯಾಗಲಿದೆ.
ವಿರಾಜಪೇಟೆಯ ಮಲೆತಿರಿಕೆ ಬೆಟ್ಟದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಶ್ರೀ ಅಯ್ಯಪ್ಪ ಸ್ವಾಮಿ ಪೂಜಾ ಮಹೋತ್ಸವವು ಡಿ.26 ರಂದು ಸಂಜೆ ಆರಂಭಗೊಳ್ಳಲಿದ್ದು, ಕ್ಷೇತ್ರ ಪಾಲಕ ಗುಳಿಗನ ಪೂಜೆ, ಡಿ.27 ರಂದು ಬೆಳಿಗ್ಗೆ 6.30ಕ್ಕೆ ಧ್ವಜರೋಹಣ ಸಂಜೆ 7 ಗಂಟೆಗೆ ವರದವಿನಾಯಕ ಸೇವಾ ಸಮಿತಿ ಮಲೆತಿರಿಕೆ ಬೆಟ್ಟ ವತಿಯಿಂದ ಮಂಡಲಪೂಜೆ ನೆರವೇಲಿದೆ.
ಡಿ.30 ರಂದು ಬೆಳಿಗ್ಗೆ ಮತ್ತು ರಾತ್ರಿ ಶ್ರೀ ಸ್ವಾಮಿಗೆ ವಿಶೇಷ ಪೂಜೆ, ಡಿ.31 ರಂದು ಬೆಳಿಗ್ಗೆ ಮತ್ತು ರಾತ್ರಿ ವಿಶೇಷ ಪೂಜೆಗಳು ನಡೆಯಲಿದೆ.
ಜ.1 ರಂದು ಬೆಳಿಗ್ಗೆ ಪ್ರಾತ:ಕಾಲ 5.30ಕ್ಕೆ ಗಣಪತಿ ಹೋಮ, ಲಕ್ಷ್ಮೀ ಪೂಜೆ, ಸರಸ್ವತಿ ಪೂಜೆ, 9 ಗಂಟೆಗೆ ತುಲಭಾರ ಸೇವೆ 10 ಗಂಟೆಗೆ ಲಕ್ಷಾರ್ಚನೆ, ಮತ್ತು 12.30ಕ್ಕೆ ಶ್ರೀ ಸ್ವಾಮಿಗೆ ಮಾಹಾಪೂಜೆ ನಂತರ ಭಕ್ತರಿಗೆ ಅನ್ನದಾನ ನಡೆಯಲಿದೆ.

ಸಂಜೆ ದೀಪಾರತಿ, ವಿದ್ಯುತ್ ಅಲಂಕೃತ ಮಂಟಪದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಕಥಾ ಸಾರಂಶ ಸಾರುವ ಸ್ತಬ್ಧ ಚಿತ್ರ, ಕೇರಳ ರಾಜ್ಯದ ಚೆಂಡೆ ಮದ್ದಳೆ, ಮಂಗಳೂರಿನ ಚಿಲಿ-ಪಿಲಿ ಗೊಂಬೆ ಇತರ ಮನರಂಜನಾ ತಂಡಗಳೋಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ಭವ್ಯ ಶೋಭಾಯಾತ್ರೆಯು ನಡೆಯಲಿದೆ. ನಂತರ ಮಲಬಾರ್ ರಸ್ತೆಯಲ್ಲಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಅಂತಿಮ ಪೂಜೆ ಸಲ್ಲಿಸಿ, ರಾತ್ರಿ 12.30 ಗಂಟೆಗೆ ಶ್ರೀ ಸುಬ್ರಮಣ್ಯ ಸ್ವಾಮಿ ಪೂಜೆ ಬಳಿಕ ಉತ್ಸವ ಕೊನೆಯಾಗಲಿದೆ.
ಜ.15 ರಂದು ಪವಿತ್ರ ಮಕರ ಜ್ಯೋತಿ ದರ್ಶನದ ಅಂಗವಾಗಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯಲಿದೆ ಎಂದು ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
ವರದಿ : ಕಿಶೋರ್ ಕುಮಾರ್ ಶೆಟ್ಟಿ










