ವಿರಾಜಪೇಟೆ ಡಿ.25 : ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗಾಂಧಿವಾದಿ ಪಂದ್ಯಂಡ ಬೆಳ್ಯಪ್ಪ, ಸ್ವಾತಂತ್ರ್ಯ ಹೋರಾಟಗಾರ್ತಿ ಪಂದ್ಯಂಡ ಸೀತಾ ಬೆಳ್ಯಪ್ಪ ಅವರ ಕುರಿತಾದ ಅವರ ಮೊಮ್ಮಗಳು ಬೊಮ್ಮಂಡ ಸವೇರ ಚಂಗಪ್ಪ ಬರೆದಿರುವ SOULFUL SOJOURN A tale of two souls ಪುಸ್ತಕ ಬಿಡುಗಡೆ ಗೊಂಡಿತು.
ಸಿದ್ದಾಪುರ ಸ್ವರ್ಣಮಾಲ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೊ) ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಕೊಡಗಿನ ಗಾಂಧಿ ಎಂದೆ ಖ್ಯಾತಿ ಹೊಂದಿರುವ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಪಂದ್ಯಂಡ ಬೆಳ್ಯಪ್ಪ, ಹಾಗೂ ಸ್ವಾತಂತ್ರ್ಯ ಹೋರಾಟಗಾರ್ತಿ ಪಂದ್ಯಂಡ ಸೀತಾ ಬೆಳ್ಯಪ್ಪ ಅವರು ಸ್ವಾತಂತ್ರ್ಯ ಇತಿಹಾಸ ಮಾತ್ರವಲ್ಲ ಸಾಮಾಜಿಕ ಕಳಕಳಿಯೊಂದಿಗೆ ವಿವಿಧ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ ಎಂದರು.

ಕೊಡಗಿನ ಸಹಕಾರಿ ಕ್ಷೇತ್ರದಲ್ಲೂ ಅವರ ಸಾಧನೆ ಅಪಾರವಾದದ್ದು. ಶಿಕ್ಷಣ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಸ್ಥಾಪನೆಗೆ ನೆಹರು ಅವರ ಕಾಲದಲ್ಲಿ ಮಂಜೂರಾತಿ ಮಾಡಿಸಿ ತಂದ ಮಹಾನ್ ವ್ಯಕ್ತಿತ್ವ ಅವರದು. ಅವರ ಜೀವನ ಚರಿತ್ರೆಯ ಪುಸ್ತಕವನ್ನು ಪ್ರತಿಯೊಬ್ಬರೂ ಓದುವಂತಾಗಬೇಕು. ಸಾಧನೆ ಮಾಡಿದ ಸಾಧಕರ ಹಿರಿಯರ ಬಗ್ಗೆ ಯುವ ಸಮೂಹ ಸೇವಾ ಮನೋಭಾವದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನಡೆಯಬೇಕೆಂದು ಸಲಹೆ ನೀಡಿದರು.
ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ನಾಡಿಗಾಗಿ ದುಡಿದಂತ ಮಹಾನ್ ವ್ಯಕ್ತಿತ್ವದ ಸಾಧಕರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡು ಅವರ ಆದರ್ಶ ವ್ಯಕ್ತಿಗಳ ಮಾರ್ಗದರ್ಶನವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು.
ಲೇಖಕಿ ಬೊಮ್ಮಂಡ ಸವೇರ ಚೆಂಗಪ್ಪ ಮಾತನಾಡಿ, ನನ್ನ ಅಜ್ಜ ಅಜ್ಜಿ ಅವರ ಸ್ವಾತಂತ್ರ್ಯ ಹೋರಾಟದ ಜೀವನ ಚರಿತ್ರೆ ಹಾಗೂ ವಿವಿಧ ಕ್ಷೇತ್ರಗಳಲ್ಲೂ ಮಾಡಿದ ಸಾಧನೆಯ ಬಗ್ಗೆ ಮುಂದಿನ ಪೀಳಿಗೆಯ ಇತಿಹಾಸದಲ್ಲಿ ಉಳಿದುಕೊಳ್ಳುವಂತೆ ಜೀವನ ಚರಿತ್ರೆಯ ಬಗ್ಗೆ ಇಂಗ್ಲಿಷಿನಲ್ಲಿ ಪುಸ್ತಕ ಬರೆದಿದ್ದೇನೆ. ಇಂತಹ ಮಹಾನ್ ವ್ಯಕ್ತಿತ್ವದ ಆದರ್ಶ ವ್ಯಕ್ತಿಗಳ ಬಗ್ಗೆ ಪ್ರತಿಯೊಬ್ಬರು ಓದಿ ತಿಳಿದುಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅಲ್ಲಾರಂಡ ವಿಠಲ್ ನಂಜಪ್ಪ, ಕರ್ನಲ್ ಬೊಮ್ಮಂಡ ಧೀರಜ್ ಚೆಂಗಪ್ಪ, ಸವೇರ ಚೆಂಗಪ್ಪ ಮತ್ತು ತಪಸ್ ದೇವಯ್ಯ, ನೆರವಂಡ ಶಾಂತಿ ನಂಜಪ್ಪ, ಕುಸುಮ ಅಯ್ಯಪ್ಪ, ಪಂದ್ಯಂಡ ವಿಜಯ್ ಬೆಳ್ಳಿಯಪ್ಪ, ಫೀ.ಮಾ. ಕಾರ್ಯಪ್ಪ-ಜ.ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಎ.ತಮ್ಮು ಪೂವಯ್ಯ, ದೆಹಲಿ ಕೊಡವ ಸಮಾಜ ಅಧ್ಯಕ್ಷ ಮಾಚಿಮಂಡ ತಮ್ಮು ಕಾರ್ಯಪ್ಪ, ಕರ್ನಲ್ ಮಂಡೇಪಂಡ ಕೆ. ಅಯ್ಯಪ್ಪ, ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಗಣ್ಯರು ಹಾಜರಿದ್ದರು.










