ಗೋಣಿಕೊಪ್ಪಲು ಡಿ.25 : ವಿವೇಕಾನಂದ, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರ ಜೀವನಾಧಾರಿತ ಪುಸ್ತಕಗಳನ್ನು ಓದುವುದರಿಂದ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಉತ್ತಮ ಬದಲಾವಣೆಯನ್ನು ಕಂಡು ಕೊಳ್ಳಬಹುದು ಎಂದು ಸಾಹಿತಿ ಹಾಗೂ ಪತ್ರಕರ್ತ ಜಗದೀಶ್ ಜೋಡುಬೀಟಿ ಸಲಹೆ ನೀಡಿದರು.
ಗೋಣಿಕೊಪ್ಪಲು ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿರುವ ಕಾವೇರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ವಾರ್ಷಿಕ ಶಿಬಿರದ 3ನೇ ದಿನದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಒಮ್ಮೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಾತ್ರಕ್ಕೆ ಬದುಕೇ ಮುಗಿದು ಹೋಗುವುದಿಲ್ಲ, ಮತ್ತೆ ಪರೀಕ್ಷೆ ಎದುರಿಸಿ ಉತ್ತೀರ್ಣರಾಗಲು ಅವಕಾಶವಿದೆ. ಸೋತಾಗ ಎದೆಗುಂದದೇ, ಎದ್ದು ನಿಂತು ಸವಾಲುಗಳನ್ನು ಎದುರಿಸಲು ಸಿದ್ದರಾಗಬೇಕು ಎಂದು ಕರೆ ನೀಡಿದರು.
ಹೆತ್ತವರು ತಮ್ಮ ಮಕ್ಕಳ ಏಳಿಗೆಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡುತ್ತಾರೆ. ಆದ್ದರಿಂದ ಮೌಲ್ಯಾಧಾರಿತ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ಬದುಕನ್ನು ಹಸನಾಗಿಸಿಕೊಂಡು, ಹೆತ್ತವರ ಕನಸುಗಳನ್ನು ಈಡೇರಿಸಬೇಕು. ಗುರುಹಿರಿಯರಿಗೆ ಗೌರವ ನೀಡುವ ಗುಣವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಗೋಣಿಕೊಪ್ಪಲು ಗ್ರಾ.ಪಂ ಸದಸ್ಯ ಬಿ.ಎನ್.ಪ್ರಕಾಶ್ ಮಾತನಾಡಿ, ಎನ್‍ಎಸ್‍ಎಸ್ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ಸೇವಾ ಮನೋಭಾವನೆಯನ್ನು ಮೂಡಿಸುವಲ್ಲಿ ಸಹಕಾರಿಯಾಗಿದೆ ಎಂದರು.
ಗೋಣಿಕೊಪ್ಪಲಿನ ಉದ್ಯಮಿ ಹಾಗೂ ಗ್ರಾಮೀಣ ಉದ್ಯೋಗ ತರಬೇತುದಾರರಾದ ರಶ್ಮಿ ಭಾನುಪ್ರಕಾಶ್ ಅವರು ಸ್ವ ಉದ್ಯೋಗ ಅಣಬೆ ಬೇಸಾಯದ ಬಗ್ಗೆ ವಿದ್ಯಾರ್ಥಿ ಗಳಿಗೆ ಮಾಹಿತಿ ನೀಡಿ ಪ್ರಾತ್ಯಕ್ಷಿಕೆಯ ಮೂಲಕ ಅಣಬೆ ಬೆಳೆಯುವ ವಿಧಾನವನ್ನು ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟರು.
ವಿದ್ಯಾರ್ಥಿಗಳು ಕೂಡ ತಮ್ಮ ತಮ್ಮ ಮನೆಗಳಲ್ಲಿ ಹಣಬೆ ಬೇಸಾಯ ಮಾಡುವ ಮೂಲಕ ಆದಾಯವನ್ನು ಗಳಿಸಬಹುದು ಎಂದು ತಿಳಿಸಿದರು.
ಪ್ರಾಂಶುಪಾಲ ಎಸ್.ಎಸ್.ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್ ಎಸ್.ಎಸ್.ಅಧಿಕಾರಿ ಕೆ.ಎಂ.ಕುಸುಮ್, ಸಹ ಶಿಬಿರಧಿಕಾರಿ ಸಚಿನ್ ನಾಯಕ್ ಇದ್ದರು.










