ಮಡಿಕೇರಿ ಡಿ.25 : ಭಾಗಮಂಡಲ ಶ್ರೀ ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯಿಂದ ಚೆಟ್ಟಿಮಾನಿಯ ಸಿಂಗತ್ತೂರು ಗ್ರಾಮದಲ್ಲಿ 33 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಡಿ.27 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೋಡಿ ಕೆ.ಪೊನ್ನಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10.30 ಗಂಟೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಕಟ್ಟಡವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶ್ರೀ ಭಗಂಡೇಶ್ವರ ತೋಟಗಾರಿಕ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಕೋಡಿ ಕೆ.ಪೊನ್ನಪ್ಪ ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಹಾಗೂ ಕೊಡಗು ಜಿಲ್ಲಾ ಸಂಘ ಸಂಸ್ಥೆಗಳ ಪ್ರತಿನಿಧಿ ಎಂ.ಪಿ.ಸುಜಾ ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಅತಿಥಿಗಳಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ, ಕರ್ನಾಟಕ ರಾಜ್ಯ ತೋಟಗಾರಿಕಾ ಇಲಾಖೆ ನಿರ್ದೇಶಕ ಬಿ.ಎಸ್.ರಮೇಶ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ವರ್ಣೀತ್ ನೇಗಿ, ಕೊಡಗು ತೋಟಗಾರಿಕಾ ಉಪನಿರ್ದೆಶಕ ಹೆಚ್.ಆರ್.ಯೋಗೇಶ್ ಭಾಗವಹಿಸಲಿದ್ದಾರೆಂದು ಹೇಳಿದರು.
ತೆಂಗಿನ ಎಣ್ಣೆ ತಯಾರಿಕಾ ಘಟಕ ಚಿಂತನೆ :: ಕರಿಕೆ ಸಮೀಪದ ಚೆತ್ತುಕಾಯದಲ್ಲಿ ಇರುವ ತೋಟಗಾರಿಕಾ ಇಲಾಖೆಯ ಜಾಗ ಲಭ್ಯವಾದಲ್ಲಿ, ಅಲ್ಲಿ ತೆಂಗಿನ ಕಾಯಿಯಿಂದ ಎಣ್ಣೆ ಉತ್ಪಾದಿಸುವ ಘಟಕವನ್ನು ತೆರೆಯಲು ಉದ್ದೇಶಿಸಲಾಗಿದೆಯೆಂದು ಕೋಡಿ ಪೊನ್ನಪ್ಪ ಅವರು ಇದೇ ಸಂದರ್ಭ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಬೊಪ್ಪಡತಂಡ ಎಂ.ಕಿಶೋರ್, ನಿರ್ದೇಶಕರುಗಳಾದ ಪೊಡನೋಳನ ಸಿ.ವಿಠಲ, ಕುದುಪಜೆ ಯು.ನಾಗೇಂದ್ರ, ಬಾರಿಕೆ ಟಿ.ಪುಷ್ಪ ಉಪಸ್ಥಿತರಿದ್ದರು.








