ಸುಂಟಿಕೊಪ್ಪ ಡಿ.25 : ಏಸುಕ್ರಿಸ್ತನ ಜನ್ಮದಿನ ಕ್ರಿಸ್‍ಮಸ್ ಹಬ್ಬವನ್ನು ಸುಂಟಿಕೊಪ್ಪದ ವಿವಿಧೆಡೆ ಸಂಭ್ರಮದಿಂದ ಆಚರಿಸಿದರು.
ಸಂತ ಅಂತೋಣಿ ದೇವಾಲಯದಲ್ಲಿ ಪ್ರಭು ಕ್ರಿಸ್ತರ ಜನನದ ಸ್ಥಳವಾದ ಗೋದಾಲಿಯನ್ನು ನಿರ್ಮಿಸಿ ಅದರಲ್ಲಿ ಏಸುಕ್ರಿಸ್ತರನ್ನು ಪ್ರತಿಷ್ಠಾಪಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಕ್ರೈಸ್ತ ಭಾಂದವರು ಅಡಂಬರ ದಿವ್ಯ ಬಲಿಪೂಜೆ ಆರಾಧನೆಯಲ್ಲಿ ಪಾಲ್ಗೊಂಡು ಮುಂಬತ್ತಿಯನ್ನು ಹಚ್ಚಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬೆಂಗಳೂರಿನ ಯೇಸು ರಕ್ಷಕರ ದೇವಾಲಯದ ಧರ್ಮಗುರು ರಾಬಿನ್, ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾ. ಅರುಳ್‍ಸೇಲ್ವಕುಮಾರ್, ಸಹಾಯಕ ಧರ್ಮಗುರುಗಳಾದ ನವೀನ್ ಗಾಯನ ಬಲಿಪೂಜೆ ಹಾಗೂ ಪ್ರಭೋದನೆಯನ್ನು ನೇರವೇರಿಸಿದರು.
ಸಂತ ಕ್ಲಾರ ಕಾನ್ವೆಂಟಿನ ಕನ್ಯಾಸ್ತ್ರೀಯರು, ಮಕ್ಕಳು, ಯುವಕ, ಯವತಿರು, ಪುರುಷ ಹಾಗೂ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಸೇರಿದ ಕ್ರೈಸ್ತ ಭಾಂದವರು ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
7ನೇ ಹೋಸಕೋಟೆ :: ಸುಂಟಿಕೊಪ್ಪ ವ್ಯಾಪ್ತಿಯ 7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರುಗಳಾದ ರೇ.ಫಾ.ಸುನಿಲ್ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಸುಂಟಿಕೊಪ್ಪ ಸಿಎಸ್‍ಐ ಇಮಾನ್ಯುವೇಲ್ ಚರ್ಚ್ ಸಭಾಪಾಲಕರಾದ ಜೋಯೆಲ್ ಸುಹಾಸ್ ಪ್ರಾರ್ಥನಾ ಕೂಟವನ್ನು ನಡೆಸಿದರು. ನಂತರ ಚರ್ಚ್ ಆವರಣದಲ್ಲಿ 24ನೇ ವರ್ಷದ ಮಕ್ಕಳ ಕ್ರಿಸ್‍ಮಸ್ ಅಂಗವಾಗಿ ಮಕ್ಕಳು ಸಾಂತಕ್ಲಾಸ್ ವೇಷದೊಂದಿಗೆ ನೃತ್ಯ ಹಾಗೂ ಯೇಸುವಿನ ಜನನದ ರೂಪಕವನ್ನು ಪ್ರದರ್ಶಿಸಿದರು. ನಂತರ ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಮಾದಾಪುರ :: ಮಾದಾಪುರ ನಿರ್ಮಲಮಾತೆ ದೇವಾಲಯದ ಧರ್ಮಗುರುಗಳಾದ ಫಾ.ರಾಜೇಶ್ ಹಟ್ಟಿಹೊಳೆಯ ಜಪಸರ ಮಾತೆ ದೇವಾಲಯದಲ್ಲಿ ಧರ್ಮಗುರು ಫಾ.ಗಿಲ್ಬರ್ಟ್ ಡಿಸಿಲ್ವ ಪ್ರಾರ್ಥನೆ, ಬಲಿಪೂಜೆ ಹಾಗೂ ಪ್ರಭೋದನೆಯನ್ನು ನೀಡಿದರು.
ನೂರಾರು ಸಂಖ್ಯೆಯಲ್ಲಿ ಕ್ರೈಸ್ತಭಕ್ತಾಧಿಗಳು ಪಾಲ್ಗೊಂಡು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮದಿಂದ ಹಬ್ಬವನ್ನು ಆಚರಿಸಿಕೊಂಡರು.
ಕ್ರೈಸ್ತಭಾಂದವರು ನಂತರ ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡರು ಮನೆಗಳಿಗೆ ತೆರಳಿ ಬಾರೀ ಬೋಜನವನ್ನು ತಯಾರಿಸಿ ಕುಟುಂಬಸ್ಥರೊಂದಿಗೆ ಸವಿದರು.
ಡಿ.1 ರಿಂದ 23 ದಿನಗಳ ಕಾಲ ದೇವಾಲಯಗಳ ಧರ್ಮಗುರುಗಳು, ಕನ್ಯಾಸ್ತ್ರೀಯರು, ದೇವಾಲಯಗಳ ಗಾಯನ ವೃಂದಾ, ಪಾಲನಾ ಸಮಿತಿ ಹಾಗೂ ಯುವಕ ಯುವತಿಯರು ಮಕ್ಕಳು ಕ್ರಿಸ್ತ ಜನ್ಮದಿನಕ್ಕೆ ಸಿದ್ಧತೆಗಾಗಿ ಪ್ರತಿ ಕ್ರೈಸ್ತ ಭಾಂಧವರ ಮನೆಗಳಿಗೆ ಕ್ಯಾರೋಲ್ ಗಾಯನ ತಂಡ ಹಾಗೂ ಸಂತಕ್ಲಾಸ್ ವೇಷಧಾರಿಗಳೊಂದಿಗೆ ಮನೆ ಮನೆಗೆ ತೆರಳಿ ಪ್ರಾರ್ಥಿಸಿ, ಆರ್ಶಿವಚಿಸಿ ಹಾಗೂ ಶುಭ ಹಾರೈಸಿದರು.









