ವಿರಾಜಪೇಟೆ ಡಿ.25 : ವೇದಿಕೆಯ ಆರಂಭ ಉತ್ತಮವಾಗಿದೆ ಆದರೆ ಅದನ್ನು ಮುಂದೆ ರಾಜಕೀಯ ಬೆರೆಯದಂತೆ ನೋಡಿಕೊಂಡು ಕಲಾವಿದೆಯರ ಬೆಳವಣಿಗೆಯ ವೇದಿಕೆಯಾಗಿ ಬೆಳೆಸಬೇಕು ಎಂದು ವಿರಾಜಪೇಟೆ ಪುರಸಭೆ ಸದಸ್ಯೆ ಮನೆಯಪಂಡ ದೇಚಮ್ಮ ಕಾಳಪ್ಪ ಹೇಳಿದರು.
ವಿರಾಜಪೇಟೆ ಪುರಭವನದಲ್ಲಿ ದಕ್ಷಿಣ ಕೊಡಗು ಲೇಖಕಿಯರ ಮತ್ತು ಕಲಾವಿದರ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿತ್ಯ ಬದುಕಿನಲ್ಲಿ ಹೆಣ್ಣುಮಕ್ಕಳಿಗೆ ಪುರುಷರಿಗಿಂತ ಹೆಚ್ಚು ಜವಾಬ್ದಾರಿ ಹಾಗೂ ಕೆಲಸದ ಒತ್ತಡವಿರುತ್ತದೆ. ಆಕೆ ಸಂಸಾರಸ್ಥೆಯಾದರೆ ಸಂಸಾರದ ಹೊಣೆಗಾರಿಕೆ ನಿಭಾಯಿಸಬೇಕು. ಜೊತೆಗೆ ವೃತ್ತಿಪರತೆಯಾದರೆ ಅದನ್ನು ನಿಭಾಯಿಸಬೇಕು. ಆದರೆ ಈ ನಡುವೆ ತನಗೆ ಸಿಗುವ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಸಮಾಜಮುಖಿಯಾಗಿಯೂ ಕೆಲಸ ಮಾಡಬೇಕಿದೆ. ಎಂದರು.

ಉತ್ತಮ ಸಾಮಾಜಿಕ ಚಟುವಟಿಕೆ ಸಾಹಿತ್ಯ ಮುಂತಾದವುಗಳಲ್ಲಿ ತೊಡಗಿಸಿಕೊಂಡು ಒಳ್ಳೆಯ ಹೆಸರುಗಳಿಸುವುದರೊಂದಿಗೆ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ವೇದಿಕೆಯ ಸ್ಥಾಪಕ ಅಧ್ಯಕ್ಷೆ ಪುಷ್ಪಲತ ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಇದು ನಮ್ಮ ಬಹುದಿನಗಳ ಕನಸಾಗಿದ್ದು, ಗ್ರಾಮೀಣ ಪ್ರತಿಭೆಗಳನ್ನು ಹೊರತಂದು ಲೇಖಕಿಯರನ್ನು ಸಂಘಟಿಸಲು ಈ ವೇದಿಕೆಯನ್ನು ರಚಿಸಲಾಗಿದೆ ಎಂದರು.
ಗ್ರಾಮೀಣ ಮಹಿಳೆಯರು ಅವಕಾಶ ವಂಚಿತರಾಗುತ್ತಿದು,್ದ ಎಲೆಮರೆಯ ಕಾಯಿಗಳಾಗಿ ಉಳಿದು ಹೋಗುತ್ತಿದ್ದಾರೆ. ಆದ್ದರಿಂದ ಮಹಿಳಾ ಲೇಖಕಿಯರು ತಮ್ಮ ಸಾಹಿತ್ಯ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಕೊಳ್ಳುವಂತಾಗಲಿ ಎಂಬುದು ನಮ್ಮ ಉದ್ದೇಶ ಎಂದರು.
ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಪನ್ಯಾಸಕಿ ಹಾಗೂ ಸಾಹಿತಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಮಾತನಾಡಿ, ಇಂದು ಮೂಲ ಉದ್ದೇಶಗಳು ಬದಲಾಗಿ ರಾಜಕೀಯವಾಗಿ ಗುರುತಿಸಿಕೊಳ್ಳುತ್ತಿವೆ. ಸಾಹಿತಿಗಳು ಕಲಾವಿದರು ಇಂದು ತಮ್ಮ ಜವಬ್ದಾರಿಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಮುನ್ನಡೆಯಬೇಕು. ಸಮಾಜಕ್ಕೆ ಉನ್ನತ ಕೊಡುಗೆ ನೀಡುವ ಹೊಣೆಗಾರಿಕೆಗಳನ್ನು ಲೇಖಕಿಯರು ಕಲಾವಿದರು ನಿಭಾಯಿಸಬೇಕು. ದಕ್ಷಿಣ ಕೊಡಗಿನಲ್ಲಿ ಲೇಖಕಿಯರು ಸಾಹಿತ್ಯಕ್ಕೆ ತಮ್ಮದೆ ಕೊಡುಗೆ ನೀಡಿದ್ದು, ಬಟ್ಟಿಯಂಡ ದೇವಕ್ಕಿ, ಪಾರ್ವತಿ ಅಪ್ಪಯ್ಯ ಇವರನ್ನು ಇಲ್ಲಿ ಸ್ಮರಿಸಬಹುದಾಗಿದೆ ಎಂದರು.
ಹಿಂದಿನ ಸಾಹಿತಿಗಳ ಸಾಹಿತ್ಯದ ಓದು ಪ್ರತಿಯೊಬ್ಬರಿಗೂ ಮುಖ್ಯವಾಗಿರುತ್ತz.É ಅದನ್ನು ಸಂಪೂರ್ಣವಾಗಿ ಅರ್ಥಹಿಸಿಕೊಳ್ಳಬೇಕು. ನಂತರ ಅದರ ಪ್ರೇರಣೆಯಿಂದ ನೀವು ಸ್ವಂತವಾಗಿ ಸಾಹಿತ್ಯ ಕೃಷಿ ನಡೆಸಬೇಕು ಹಾಗೂ ತನ್ನದೆಯಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಮಹಿಳೆಯರಿಂದ ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ಇರಲಿ, ಆ ಮೂಲಕ ಸಾಹಿತ್ಯ ಬೆಳೆದು ಬರಲಿ. ಉತ್ತಮ ಸಾಹಿತಿಗಳನ್ನು, ಕಲಾವಿದರನ್ನು ಬೆಳೆಸುವಲ್ಲಿ ಈ ವೇದಿಕೆ ಶ್ರಮಿಸಲಿ ಎಂದು ಹಾರೈಸಿದರು.
ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹೆಚ್.ಜಿ.ಸಾವಿತ್ರಿ ಮಾತನಾಡಿ, ವೇದಿಕೆ ಹುಟ್ಟು ಹಾಕಿ ಅದನ್ನು ಬೆಳೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಇಂದು ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ದಕ್ಷಿಣ ಕೊಡಗಿನ ಸಾಹಿತಿಗಳು, ಕಲಾವಿದರ ಪ್ರೋತ್ಸಾಹಕ್ಕೆ ನೂತನ ವೇದಿಕೆ ಸೃಷ್ಟಿಯಾಗಿರುವುದು ಶ್ಲಾಘನೀಯ ಎಂದು ಪ್ರಶಾಂಸಿದರು.
ಕರ್ನಾಟಕ ಲೇಖಕಿಯರ ಸಂಘದ ವಿರಾಜಪೇಟೆ ತಾಲೂಕು ಅಧ್ಯಕ್ಷೆ ಸಾಹಿತಿ ರಜಿತ ಕಾರ್ಯಪ್ಪ ಸ್ವಾಗತಿಸಿದರು. ಸಾಹಿತಿಗಳಾದ ಸೋಮೆಯಂಡ ಕೌಶಲ್ಯ ಸತೀಶ್ ಪ್ರಾರ್ಥಿಸಿದರು. ಶಿಕ್ಷಕರು, ಕವಿಗಳು ಆಗಿರುವ ಎಂ.ಕೆ. ನಳಿನಾಕ್ಷಿ ಹಾಗೂ ಕವಿಗಳಾದ ವಿಮಲ ದಶರಥ ನಿರೂಪಿಸಿದರು. ವಿದೂಷಿ ಪ್ರೇಮಾಂಜಲಿ ಆಚಾರ್ಯ ವಂದಿಸಿದರು. ಗಾಯಕರುಗಳಾದ ಸುಪ್ರಿತಾ ದಿಲೀಪ್, ಹಾಗೂ ಅನಿತಾ ರಾಜೇಶ್ ಕನ್ನಡ ಗೀತಾ ಗಾಯನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕವಿಗಳು ಸಾಹಿತಿಗಳು ಹಾಜರಿದ್ದರು.









