ಮಡಿಕೇರಿ ಡಿ.26 : ಎಲ್ಲಾ ಕೊಡವ ಸಮುದಾಯದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ವತಿಯಿಂದ ಡಿ.29 ಮತ್ತು 30 ರಂದು ಮಡಿಕೇರಿಯಲ್ಲಿ ವಿಶ್ವ ಕೊಡವ ಸಮ್ಮೇಳನ (“ಗ್ಲೋಬಲ್ ಕೊಡವ ಸಮ್ಮಿಟ್”) ನಡೆಯಲಿದ್ದು, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಚೇಂದಂಡ ಶಮ್ಮಿ ಮಾದಯ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಡಿ.29 ರಂದು ಬೆಳಿಗ್ಗೆ 11.45ಕ್ಕೆ ಗಣ್ಯರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಖಿಲ ಕೊಡವ ಸಮಾಜದ ಅಧ್ಯಕ್ಷರು, ದೇಶ ತಕ್ಕರಾದ ಪರದಂಡ ಸುಬ್ರಮಣಿ, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಬುದ್ಧ ಸಿದ್ಧಿ, ರಾಷ್ಟ್ರೀಯ ಪಠ್ಯಕ್ರಮ ಶಿಕ್ಷಣ ಸಚಿವಾಲಯದ ಮುಖ್ಯ ಸಲಹೆಗಾರರಾದ ಡಾ.ಚೇತನ್ ಸಿಂಘೈ, ರಶ್ಮಿ ಸಮಂತ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಡಾ.ಮಂಥರ್ ಗೌಡ ಪಾಲ್ಗೊಳ್ಳಲಿದ್ದಾರೆ ಎಂದರು.
ಕೊಡಗು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ್, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಆತ್ಮನಿರ್ಭರ ಅಧ್ಯಕ್ಷೆ ಕುಪ್ಪಂಡ ಛಾಯಾ ನಂಜಪ್ಪ, ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತ ಪೂವಯ್ಯ ಹಾಗೂ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ರಕ್ಷಣೆ ಮತ್ತು ಸುಧಾರಣೆ ಸಮಾವೇಶ ನಡೆಯಲಿದ್ದು, ಖ್ಯಾತ ಆದ್ಯಾತ್ಮಿಕ ವಿಜ್ಞಾನಿ ಬೊಪ್ಪಂಡ ರಶ್ಮಿ ಅಯ್ಯಪ್ಪ ಜನರ ಆರೋಗ್ಯ ರಕ್ಷಣೆಯ ವಿಚಾರವಾಗಿ ಉಪಯುಕ್ತ ಮಾಹಿತಿ ನೀಡಲಿದ್ದಾರೆ. ಅಲ್ಲದೇ ನಾಡ ಮಣ್ಣ್ ನಾಡ ಕೂಳ್ ಸಮಾವೇಶ ನಡೆಯಲಿದ್ದು, ಡಾ.ಚೆಪ್ಪುಡಿರ ಜಿ.ಕುಶಾಲಪ್ಪ ನೇತೃತ್ವದಲ್ಲಿ ಕೊಡಗಿನಲ್ಲಿನ ಕೊಡವರ ಆಸ್ತಿ ಮಾರಾಟ ತಡೆ ಮತ್ತು ನಮ್ಮ ಆಚರಣೆಗಳು ಹಾಗೂ ಸಂಸ್ಕøತಿಗೆ ಹಾಸುಹೋಕ್ಕಾಗಿರುವ ಕೃಷಿಯನ್ನು ಮುಂದುವರೆಸಲು ಪರ್ಯಾಯ ಮಾರ್ಗಗಳ ಅನ್ವೇಷಣೆಯ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ದೇಶ ತಕ್ಕರೊಂದಿಗೆ ವಿಚಾರ ವಿಮರ್ಷೆ ನಡೆಯಲಿದ್ದು, ಕೊಡವ ನಾಡಿನ 8 ದೇಶ ತಕ್ಕರನ್ನೊಳಗೊಂಡ ಈ ಸಮಾವೇಶದಲ್ಲಿ ಕೊಡವರಲ್ಲಿ ಆದಿಕಾಲದಿಂದಲೂ ಬಂದ ತಕ್ಕಾಮೆ ಪದ್ಧತಿಯ ವೈಶಷ್ಟ್ಯತೆ ಮತ್ತು ತಕ್ಕಾಮೆಯ ಮಹತ್ವ, ಜವಾಬ್ದಾರಿಗಳ ಬಗ್ಗೆ ಮಾತುಕತೆ ನಡೆಯಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಕೊಡವ ಜನಾಂಗದವರನ್ನು ಉತ್ತೇಜಿಸುವ ಸಲುವಾಗಿ ಖ್ಯಾತ ಉದ್ಯಮಿ ಪುಗ್ಗೇರ ದೇವಯ್ಯ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಎರಡು ದಿನಗಳ ಸಮ್ಮೇಳನದ ಉದಕ್ಕೂ ಸುಮಾರು 40 ತಂಡಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದ್ದು, ಸುಮಾರು 600 ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಇದರೊಂದಿಗೆ ಫುಡ್ ಮತ್ತು ಶಾಪಿಂಗ್ ಫೆಸ್ಟ್ ಆಕರ್ಷಣೆಯಾಗಲಿದ್ದು, ಸುಮಾರು 60 ಮಳಿಗೆಗಳು ಈಗಾಗಲೇ ನೋಂದಾಯಿಸಿಕೊಂಡಿದೆ. ಇದಲ್ಲದೆ ಕೊಡವ ಭಾಷಾ ಪುಸ್ತಕ ಮಾರಾಟ ಮಳಿಗೆಯೂ ಇರಲಿದೆ ಎಂದು ತಿಳಿಸಿದರು.
ಮದುವೆ ಸಂಬಂಧಗಳ ಜೋಡನೆಗೆ ತಂದು-ಬೆಂದು ಬಿಡಾರದಲ್ಲಿ ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಮುಂದಾಳತ್ವದಲ್ಲಿ ಸಿದ್ಧತೆ ನಡೆದಿದ್ದು, ಕೊಡವರ ಐನ್‍ಮನೆ ನಿರ್ಮಾಣ ಮಾಡಿ ಕೊಡವರ ದೈನಂದಿನ ಬದುಕಿಗೆ ನಂಟಾಗಿರುವ ವೈಶಿಷ್ಟ್ಯ ಪೂರ್ಣ ಮಾಹಿತಿಯ ವೀಕ್ಷಣೆ ಮತ್ತು ಅರಿವು ಮೂಡಿಸುವ ಪಡಿಪು ಕೈಯ್ಯಾಲೆಯ ಮೂಲಕ ಮರೆಯಾಗುತ್ತಿರುವ ಕೊಡವರ ಶ್ರೀಮಂತ ಸಂಸ್ಕøತಿ, ಪರಂಪರೆಯ ಪ್ರದರ್ಶನವಿರುತ್ತದೆ. ಹಳೆಯ ಕಾಲದ ವಸ್ತುಗಳ ಮ್ಯೂಸಿಯಂ ಕೂಡ ಅಲ್ಲಿ ವೀಕ್ಷಣೆಗೆ ಸಿಗಲಿವೆ ಎಂದರು.
ಡಿ.30 ರಂದು ಸಾಂಪ್ರದಾಯಿಕ ನೃತ್ಯ ಹಾಗೂ ಹಾಡು ಸ್ಪರ್ಧೆ ನಡೆಯಲಿದ್ದು, 25 ರಿಂದ 30 ತಂಡಗಳ ದಾಖಲೆಯ ನೋಂದಾವಣಿಯಾಗಿದೆ ಎಂದು ಮಾಹಿತಿ ನೀಡಿದರು.
ಕೊಡವರ ಆಚಾರ, ವಿಚಾರ, ಪದ್ಧತಿ, ಪರಂಪರೆಯ ವಿಷಯವಾಗಿ ಸಾಂಸ್ಕøತಿಕ ಸಮಾವೇಶ ನಡೆಯಲಿದ್ದು, ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬುವ ಸಲುವಾಗಿ ತೀತಮಾಡ ಅರ್ಜುನ್ ದೇವಯ್ಯ ಮತ್ತು ಮೆ.ಜನರಲ್ ಮುಕ್ಕಾಟಿತ ದೇವಯ್ಯ ಅವರಿಂದ ಕ್ರೀಡಾ ಸಮಾವೇಶ ನಡೆಲಿದೆ. ಅಲ್ಲದೇ ನಾಗರೀಕ ಸೇವೆ ಮತ್ತು ಡಿಫೆನ್ಸ್ ಸಮಾವೇಶ, ಎಲ್ಲಾ ಕೊಡವ ಸಮಾಜಗಳ ಅಧ್ಯಕ್ಷರ ಸಮಾವೇಶ, ಗನ್ ಸಮಾವೇಶ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಡಿಜೆ ನೈಟ್ ಮೂಲಕ ಕಾರ್ಯಕ್ರಮ ಕೊನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ನಿರ್ದೇಶಕ ಪಾಲೆಂಗಡ ಅಮಿತ್ ಭೀಮಯ್ಯ ಮಾತನಾಡಿ, ಕಾರ್ಯಕ್ರಮಕ್ಕೆ ವಿಶ್ವದಾದ್ಯಂತ ನೆಲೆಸಿರುವ ಕೊಡವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರಿಂದ ನಗರದ ಬಸ್‍ನಿಲ್ದಾಣದ ಹಿಂಭಾಗ, ಸಂತ ಜೊಸೆಫರ ಶಾಲೆ ಸಮೀಪ ಹಾಗೂ ಐಟಿಐ ಕಾಲೇಜಿನ ಸಮೀಪ ವಾಹನ ನಿಲುಕಡೆಗೆ ಸ್ಥಳ ಗುರುತಿಸಲಾಗಿದ್ದು, ಆಮಿಸುವ ಎಲ್ಲರಿಗೂ ನಿಗಧಿತ ಸ್ಥಳದಿಂದಲೇ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಟ್ರಸ್ಟ್‍ನ ಅಧ್ಯಕ್ಷ ಶಾಂತೆಯಂಡ ನಿರನ್ ನಾಚಪ್ಪ ಮಾತನಾಡಿ, ಕೊಡವರ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ, ಕೊಡವರು ಎದುರಿಸುತ್ತಿರುವ ಸಮಸ್ಯೆಗಳು, ಕೊಡವರ ಸಂಸ್ಕೃತಿ, ಸಂಪ್ರದಾಯ ಹಾಗೂ ಕೊಡವರ ವಿನೂತನ ಆಚರಣೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಮತ್ತು ಮುಂದಿನ ನಡೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಬೊಳ್ಳೇರ ಪೃಥ್ವಿ ಪೂಣಚ್ಚ, ಮಂದೇಂಗಡ ನಿರನ್ ಸೋಮಣ್ಣ, ಚೊಟ್ಟೆಯಂಡ ಸಂಜು ಕಾವೇರಪ್ಪ ಉಪಸ್ಥಿತರಿದ್ದರು.