ವಿರಾಜಪೇಟೆ ಡಿ.27 : ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವ ಮೂಲಕ ಅವರ ಆದರ್ಶವನ್ನು ಪಾಲಿಸಬೇಕು ಎಂದು ಸರ್ವೋದಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಖಜಾಂಚಿ ಕೆ.ವಾಸಂತಿ ಹೇಳಿದರು.
ವಿರಾಜಪೇಟೆ ಪಂಜಾರುಪೇಟೆಯಲ್ಲಿರುವ ಸರ್ವೋದಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಬಿಳಿ ಮಗ್ಗ ಸಮಾಜ ದಕ್ಷಿಣ ಕೊಡಗು’ ಇದರ ನಾಲ್ಕನೇ ವರ್ಷದ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ಸುಶಿಕ್ಷಿತರಾಗಬೇಕು. ಹೆಣ್ಣೊಂದು ಕಲಿತರೆ ಶಾಲೆಯೋಂದು ತೆರೆದಂತೆ ಪ್ರತಿಯೋಂದು ಹೆಣ್ಣು ಮಗು ವಿದ್ಯಾವಂತರಾಗಿ ಉನ್ನತ ಹುದ್ದೆಗೇರುವ ಮೂಲಕ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತಾಗಬೇಕು. ಈ ಹಿಂದೆ ಹಿರಿಯರಾದ ಬಿ.ವಿ.ರಮಣ ಅವರು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಸರ್ವೋದಯ ಎಂಬ ಹೆಸರಿಟ್ಟರು ಈ ಸಂಸ್ಥೆಯಲ್ಲಿ ಸಾವಿರಾರು ಹೆಣ್ಣುಮಕ್ಕಳು ವಿದ್ಯೆ ಕಲಿತು ಉನ್ನತ ಸ್ಥಾನದಲ್ಲಿದ್ದಾರೆ ಎಂದರು.
ಬಿಳಿ ಮಗ್ಗ ಸಮಾಜದ ಅಧ್ಯಕ್ಷ ಬಿ.ಆರ್.ಅನಿಲ್ ಕುಮಾರ್ ಮಾತನಾಡಿ, ದಕ್ಷಿಣ ಕೊಡಗಿನಲ್ಲಿ ಬಿಳಿ ಮಗ್ಗ ಸಮಾಜದ ಜನಾಂಗ ಬಾಂಧವರು ಅಧಿಕ ಸಂಖ್ಯೆಯಲ್ಲಿದ್ದು, ಸಮಾಜದ ಏಳಿಗೆಗಾಗಿ ಜನಪ್ರತಿನಿಧಿಗಳಿಂದ ಸಂಘದ ಕಟ್ಟಡ ನಿರ್ಮಾಣಕ್ಕೆ ಜಾಗದ ಅವಶ್ಯಕತೆ ಇರುವುದರಿಂದ ಸರಕಾರದ ಜಾಗವನ್ನು ನೀಡುವಂತೆ ಕೋರಿ ಮನವಿ ಸಲ್ಲಿಸಿ ಒತ್ತಾಯಿಸುವುದಾಗಿ ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್. ತ್ಯಾಗರಾಜ್ ವಾರ್ಷಿಕ ವರದಿ ಮಂಡಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಂ.ಚೇತನ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಸದಸ್ಯರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕುಮಾರಿ ಬಿ.ಟಿ.ಕವನ, ಲಿಖಿತ, ಉಷಾರಾಣಿ, ಬಿ.ಟಿ. ದೇವರಾಜ್ ಸೇರಿದಂತೆ ಇತರರು ಇದ್ದರು.