ವಿರಾಜಪೇಟೆ ಡಿ.27 : ವಿಕಲಚೇತನರು ಸರಕಾರದ ಸೌಲಭ್ಯಗಳಿಂದ ವಂಚಿತರಾಗದಂತೆ ಎಚ್ಚರ ವಹಿಸಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಮಂಜುನಾಥ್ ಹೇಳಿದರು.
ಅಂತರಾಷ್ಟ್ರಿಯ ವಿಕಲಚೇತನರ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆ” ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಅಧಿಕಾರಿ ರೀತಾ ಮಾತನಾಡಿ, ವಿಕಲಚೇತನರ ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಜ್ಞಾನವನ್ನು ರೂಡಿಸಿಕೊಂಡು ತಮ್ಮ ಹಕ್ಕು ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು. ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಈಗಾಗಲೇ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಯೋಜನೆ, ಸಾಧನ ಸಲಕರಣೆ ಪೂರೈಕೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯ ಉಜ್ವಲವಾಗಲು ಹಿರಿಯರ ಅನುಭವದ ಮಾತನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್.ಕೆ.ಜ್ಯೋತಿ, ವಿದ್ಯಾರ್ಥಿಗಳು ಕ್ಷಣಿಕದ ಆಸೆಗೆ ಭವಿಷ್ಯವನ್ನು ಹಾಳು ಮಾಡಿ ಕೊಳ್ಳಬೇಡಿ. ಹಿರಿಯರ ಆದರ್ಶವನ್ನು ಪಲಿಸಬೇಕು. ಹಾಗೂ ಮೊಬೈಲ್ ಪೋನ್ ದೂರ ಇಟ್ಟು ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸುವ ಮೂಲಕ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.
ವೇದಿಕೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಸಂತೋಷ ಕೊಠಾರಿ, ಪ್ರೌಢಶಾಲಾ ವಿಭಾಗದ ಚಂದ್ರಶೇಖರ್ ಹಾಜರಿದ್ದರು.
ಕಾಲೇಜಿನ ಉಪನ್ಯಾಸಕರಾದ ದಮಯಂತಿ, ಆಂಗ್ಲ ಭಾಷ ಉಪನ್ಯಾಸಕರಾದ ಬಿ.ಎಂ.ನಳಂದ, ನ್ಯಾಯಾಲಯದ ಸಿಬ್ಬಂದಿ ಮಂಜುನಾಥ್ ಹಾಗೂ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಶಿಕ್ಷಕವೃಂದ ಹಾಜರಿದ್ದರು.