ಮಡಿಕೇರಿ ಡಿ.27 : ಹಿಂದೂ ಸಂಘಟನೆಯ ಪ್ರಮುಖ, ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಪ್ರಭಾಕರ ಭಟ್ ಅವರು ಮುಸ್ಲಿಂ ಮಹಿಳೆಯರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಎಂ.ಎ.ಕಲೀಲ್ ಬಾಷ, ಸಮಾಜದ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಂಡ್ಯದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಪ್ರಭಾಕರ ಭಟ್ ಅವರು, ಮುಸ್ಲಿಂ ಮಹಿಳೆಯರ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡಿದ್ದಾರೆ. ಇದು ಇಡೀ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಅತ್ಯಂತ ಶಾಂತಿ ಮತ್ತು ಸೌಹಾರ್ಧತೆಯ ದಿನಗಳನ್ನು ಕಾಣುತ್ತಿರುವ ಕರ್ನಾಟಕ ರಾಜ್ಯದಲ್ಲಿ ಮತ್ತೆ ಕೋಮುದ್ವೇಷ ಬಿತ್ತಲು ಈ ರೀತಿಯ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಚುನಾವಣೆಗಳು ಸಮೀಪಿಸುವಾಗ ಯಾವುದೋ ಪಕ್ಷವನ್ನು ಮೆಚ್ಚಿಸಲು ಮತ್ತು ಪ್ರಚಾರ ಪಡೆಯಲು ಅಸಂಬದ್ಧ ಭಾಷಣಗಳನ್ನು ಮಾಡಲಾಗುತ್ತಿದೆ. ವಿನಾಕಾರಣ ಪ್ರತಿಬಾರಿ ಮುಸಲ್ಮಾನರನ್ನು ಗುರಿ ಮಾಡಿಕೊಂಡು ಅವಹೇಳನ ಮಾಡುವುದು ಖಂಡನೀಯ. ಮುಸ್ಲಿಂ ಮಹಿಳೆಯರಿಗೆ ನೋವುಂಟು ಮಾಡಿರುವ ಪ್ರಭಾಕರ ಭಟ್ ಅವರು ಬಹಿರಂಗ ಕ್ಷಮೆಯಾಚಿಸಬೇಕು. ಪೊಲೀಸರು ಕೋಮು ಪ್ರಚೋದನೆಯ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಅವರನ್ನು ತಕ್ಷಣ ಬಂಧಿಸಬೇಕು. ಇನ್ನು ಮುಂದೆ ಯಾರೂ ಕೂಡ ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಮತ್ತು ಸಮಾಜದಲ್ಲಿ ಅಶಾಂತಿ ಮೂಡಿಸದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂ.ಎ.ಕಲೀಲ್ ಬಾಷ ಒತ್ತಾಯಿಸಿದ್ದಾರೆ.









