ಸೋಮವಾರಪೇಟೆ ಡಿ.27 : ಶಿಥಿಲಾವಸ್ಥೆಯಲ್ಲಿರುವ ಅಂಗಡಿ ಮಳಿಗೆಗಳ ಹರಾಜು ಮಾಡಲು ಹೊರಟಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪಟ್ಟಣ ಪಂಚಾಯ್ತಿ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಾಯ್ತಿ ಸಭೆಯಲ್ಲಿ ಸಿ.ಕೆ.ಸುಬ್ಬಯ್ಯ ರಸ್ತೆಯ ವಾಣಿಜ್ಯ ಮಳಿಗೆಗಳು ಶಿಥಿಲಾವಸ್ಥೆ ತಲುಪಿದ್ದು, ದುರಸ್ತಿಗೊಳಿಸಿ ನಂತರ ಹರಾಜು ನಡೆಸಿ ಈ ಬಗ್ಗೆ ಆಡಳಿತಾಧಿಕಾರಿ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದರೂ ಸದಸ್ಯರ ಮಾತಿಗೆ ಸ್ಪಂದಿಸದಿದ್ದರಿಂದ ಸದಸ್ಯರು ಕಟ್ಟಡ ಅವ್ಯವಸ್ಥೆಯನ್ನು ಅನಾವರಣ ಗೊಳಿಸಿದರು.
ಕಟ್ಟಡ ಗೋಡೆಯನ್ನು ಕೈನಲ್ಲಿ ಬಡಿದರೆ ಬಿದ್ದು ಹೋಗುತ್ತಿದೆ, ಗೋಡೆಯಲ್ಲಿರುವ ಇಟ್ಟಿಗೆಗಳನ್ನು ಕೈನಲ್ಲಿ ಎಳೆದರೆ ಹೊರಬರುತ್ತಿದೆ. ಮೇಲ್ಛಾವಣಿ ಅಲ್ಲಲ್ಲಿ ಉದುರಿ ಬೀಳುತಿದ್ದು, ಕಬ್ಬಿಣ ಹೊರಬಂದಿವೆ ಇಲ್ಲಿನ ವರ್ತಕರು ಜೀವ ಕೈಯಲ್ಲಿ ಹಿಡಿದು ವ್ಯಾಪಾರ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸದಸ್ಯರು ಆತಂಕ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯ್ತಿ ಸದಸ್ಯ ಹಾಗೂ ಮಾಜಿ ಉಪಾಧ್ಯಕ್ಷ ಸಂಜೀವ ಈ ಸಂದರ್ಭ ಪ್ರತಿಕ್ರಿಯಿಸಿ ಪಂಚಾಯ್ತಿಯ ಅತ್ಯಂತ ಹಳೆಯ ಕಟ್ಟಡ. ಇದು ಶಿಥಿಲಾವಸ್ಥೆ ತಲುಪಿದ್ದು ತುರ್ತಾಗಿ ದುರಸ್ತಿ ಆಗಲೇ ಬೇಕಾಗಿದೆ. ಮಳಿಗೆ ಸಂಖ್ಯೆ 5 ಪರಿಶಿಷ್ಟ ಜಾತಿಗೆ ಮೀಸಲಿರಿಸಿರುವ ಕೊಠಡಿ. ಇಷ್ಟು ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ನೀಡುವುದು ಸರಿಯೇ ಎಂದರು.
ನಾವು ಹರಾಜು ನಡೆಸಲು ವಿರೋಧವಿಲ್ಲ ಅವ್ಯವಸ್ಥೆ ಸರಿಪಡಿಸಿ, ಮೀಸಲಾತಿ ತಾರತಮ್ಯ ನಿವಾರಿಸಿ ಹರಾಜು ನಡೆಸಿ ಎನ್ನುತಿದ್ದೇವೆ. ಆದರೆ ಆಡಳಿತಾಧಿಕಾರಿ ನಮ್ಮ ಮಾತನ್ನು ಕೇಳುವ ಸೌಜನ್ಯವನ್ನೆ ತೋರುತ್ತಿಲ್ಲ ಎಂದರು.
ಈ ಸಂದರ್ಭ ಪ.ಪಂ ಸದಸ್ಯರುಗಳಾದ ಪಿ.ಕೆ.ಚಂದ್ರು, ಶುಭಕರ, ಜೀವನ್ , ಮೃತ್ಯುಂಜಯ ಹಾಗೂ ಸ್ಥಳೀಯ ವರ್ತಕರು ಹಾಜರಿದ್ದರು.