ಶ್ರೀಮಂಗಲ ಡಿ.27 : ಪ್ರತಿಷ್ಠಿತ ‘ಕೊಡವ ತಕ್ಕ್ ಎಳ್ತ್‌ಕಾರಡ ಕೂಟ’ ಹಾಗೂ ಪೊನ್ನಂಪೇಟೆ ಹಳ್ಳಿಗಟ್ಟ್ ‘ನಿನಾದ ವಿದ್ಯಾಸಂಸ್ಥೆಯ ಜಂಟಿ ಆಶ್ರಯದಲ್ಲಿ ಕೊಡವ ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಿನಾದ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ‘ಜನಪ್ರಿಯ ಕೊಡವ ಸಾಹಿತ್ಯ ಮಾಲೆ’ ಯೋಜನೆಯ 186ನೇ ಹೆಜ್ಜೆಯ ಮೂಕಳೆರ ಟೈನಿ ಪೂಣಚ್ಚ ಬರೆದ “ರುದ್ರಾಕ್ಷಿ ಮಾಲೆ” ಹಾಗೂ 187ನೇ ಹೆಜ್ಜೆಯ ತಂಬಾಂಡ ಡ್ಯಾನಿ ನಾಣಯ್ಯ ಬರೆದ “ಡ್ಯಾನಿರ ಚುಯಿಂಕ್” ಎಂಬ ಎರಡು ನೂತನ ಪುಸ್ತಕಗಳು ಲೋಕಾರ್ಪಣೆಗೊಂಡವು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದ ‘ಕೂಟ’ದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಕೇವಲ ಪ್ರಶಸ್ಥಿ, ಸನ್ಮಾನಗಳನ್ನು ಪಡೆಯುವ ಹಾಗೂ ತಾನೋರ್ವ ಲೇಖಕನೆಂದು ಗುರುತಿಸಿಕೊಳ್ಳುವ ದುರಾಸೆಯಿಂದ ಬರೆಯುವವರು ಉತ್ತಮ ಲೇಖಕರಾಗಲಾರರು. ಸಾಹಿತ್ಯ ಸೃಷ್ಟಿ ಒಂದು ತಪಸ್ಸು, ಅದು ಅರ್ಥ ಕಳೆದುಕೊಳ್ಳಬಾರದು. ಭಾವನೆಗೆ ನೀಡಬಹುದಾದ ಅಕ್ಷರ ರೂಪವನ್ನ ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ದತ್ತಿನಿಧಿ ದಾನಿಗಳಾದ ಕೈಬಿಲೀರ ಪಾರ್ವತಿ ಬೋಪಯ್ಯ ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳಾಗಿರುವುದರಿಂದ ವಿದ್ಯಾರ್ಥಿಗಳಾಗಿರುವಾಗಲೇ ಮಕ್ಕಳಲ್ಲಿ ಮಾತೃಭಾಷೆ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಕಲಿಸಬೇಕು. ಪೋಷಕರು ಹಾಗೂ ಶಿಕ್ಷಕರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಆ ನಿಟ್ಟಿನಲ್ಲಿ ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ಈ ಕಾರ್ಯ ಶ್ಲಾಘನೀಯ. ಎಲ್ಲರೂ ಎಷ್ಟೇ ಬೆಳವಣಿಗೆ ಸಾಧಿಸಿದರೂ ತಾವು ಹುಟ್ಟಿ ಬೆಳೆದ ಕೊಡಗಿನ ಈ ಮಣ್ಣನ್ನು ಮರೆಯದಿರಿ ಎಂದು ಸಲಹೆ ನೀಡಿದರು.
ಪುಸ್ತಕ ಲೇಖಕಿ ಮೂಕಳೆರ ಟೈನಿ ಪೂಣಚ್ಚ, ಲೇಖಕ ತಂಬಾಂಡ ಡ್ಯಾನಿ ನಾಣಯ್ಯ ಪುಸ್ತಕ ಬರೆಯುವ ಸಂದರ್ಭದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
‘ರುದ್ರಾಕ್ಷಿಮಾಲೆ’ ಪುಸ್ತಕ ಬಿಡುಗಡೆ ಮಾಡಿದ ದಾನಿಗಳಾದ ಮೂಕಳೆರ ಸುರೇಶ್ ಪೂಣಚ್ಚ ಹಾಗೂ ‘ಡ್ಯಾನಿರ ಚುಯಿಂಕ್’ ಪುಸ್ತಕ ಬಿಡುಗಡೆ ಮಾಡಿದ ತಂಬಾಂಡ ಕುಶಿ ನಾಣಯ್ಯ ಸಾಹಿತ್ಯ ಸೃಷ್ಠಿಸಲು ತಮ್ಮಿಂದ ಸಾಧ್ಯವಿಲ್ಲದಿದ್ದರೂ ಲೇಖಕರ ಪುಸ್ತಕ ಬಿಡುಗಡೆಗೆ ಧನ ಸಹಾಯ ನೀಡುವ ಮೂಲಕ ಸಾಹಿತ್ಯ ಸೇವೆ ಮಾಡಿ ಹೆಚ್ಚು ಸಾಹಿತ್ಯ ಪ್ರಕಟಗೊಳ್ಳುವಂತೆ ಮಾಡಲು ಎಲ್ಲಾರೂ ಮನಸ್ಸು ಮಾಡಬೇಕೆಂದರು.
ನಿನಾದ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶಿಲ್ಪ ಹಾಗೂ ಆಡಳಿತ ಅಧಿಕಾರಿ ನಾಗೇಂದ್ರ ಮಾತನಾಡಿ ಇಂತಹ ಅತ್ಯುತ್ತಮ ಕಾರ್ಯಕ್ರಮ ತಮ್ಮ ಶಾಲೆಯಲ್ಲಿ ನಡೆದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೈಬಿಲೀರ ಬೋಪಯ್ಯ ದತ್ತಿನಿಧಿ ಸಣ್ಣ ಕಥೆ ಬರೆಯುವ ಸ್ಪರ್ಧೆಯಲ್ಲಿ ಕೋಟ್ರಂಗಡ ಸಜನಿ ಸೋಮಯ್ಯ ಪ್ರಥಮ, ಅಜ್ಜಿಕುಟ್ಟಿರ ಭವ್ಯ ದ್ವಿತೀಯ, ಸಣ್ಣುವಂಡ ಅಕ್ಕಮ್ಮ ತ್ರತೀಯ ಬಹುಮಾನವನ್ನೂ
ಇಟ್ಟೀರ ರಾಜಪ್ಪ ದತ್ತಿನಿಧಿ ಚುಟುಕ ಬರೆಯುವ ಸ್ಪರ್ಧೆಯಲ್ಲಿ ಪಂದ್ಯಂಡ ರೇಣುಕ ಸೋಮಯ್ಯ ಪ್ರಥಮ, ಬಾದುಮಂಡ ಬೀನ ಕಾಳಯ್ಯ ದ್ವಿತೀಯ, ಮುಕ್ಕಾಟಿರ ಮೌನಿ ನಾಣಯ್ಯ ತೃತೀಯ ಬಹುಮಾನ ಪಡೆದುಕೊಂಡರು.
ಈ ಸಂದರ್ಭ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಗೆ, ಕಾಲೇಜು ಹಾಗೂ ಸಾರ್ವಜನಿಕ ವಿಭಾಗಕ್ಕೆ ನಡೆದ ಕೊಡವ ಭಾಷೆಯ ಹಾಡುಗಾರಿಕೆ, ಕೊಡವ ಪುಸ್ತಕ ಓದುವುದು, ಕೊಡವ ಶಬ್ದ ಹೇಳುವ ಸ್ಪರ್ಧೆ, ಕೊಡವ ಭಾಷೆಯಲ್ಲಿ ಆಶುಭಾಷಣ, ಕೊಡವ ಭಾಷೆಯ ಹಾಸ್ಯ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವಿಭಾಗವಾರು ತಲಾ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು. ನಿನಾದ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ಕೊಡವ ನೃತ್ಯ ಪ್ರದರ್ಶನ ನಡೆಯಿತು.