ಕುಶಾಲನಗರ ಡಿ.28 : ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲತೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ತಮ್ಮ ನಿರ್ಧಿಷ್ಟ ಗುರಿ ಸಾಧಿಸಬೇಕು ಎಂದು ಕೊಡಗು ಸೇವಾ ಭಾರತಿ ಜಿಲ್ಲಾಧ್ಯಕ್ಷ ಟಿ.ಸಿ.ಚಂದ್ರನ್ ಸಲಹೆ ನೀಡಿದರು.
ಕುಶಾಲನಗರ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವನದಲ್ಲಿ ಮಹತ್ತರವಾದ ಗುರಿ ಇಟ್ಟು ಕೊಂಡು ಪರಿಶ್ರಮಪೂರಕವಾಗಿ ಗುರಿ ಸಾಧಿಸುವತ್ತ ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದರು.
ವಿಕಸಿತ ಭಾರತ ನಿರ್ಮಾಣದಲ್ಲಿ ಮಹತ್ತರ ಜವಾಬ್ದಾರಿ ಯುವ ಪೀಳಿಗೆಗೆ ಇದೆ. ರಾಷ್ಟ್ರಭಕ್ತಿ, ರಾಷ್ಟ್ರೀಯ ಜಾಗೃತಿಯೊಂದಿಗೆ ತಮ್ಮ ಬದುಕು ಸಾಧಿಸಬೇಕಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನಾಂಗದಲ್ಲಿ ದೇಶ ಭಕ್ತಿಯ ಕೊರತೆ ಕಂಡು ಬರುತ್ತಿದೆ. ಜೊತೆಗೆ ಸ್ವಾರ್ಥ ಚಿಂತನೆ ಎಲ್ಲಾ ಕ್ಷೇತ್ರಗಳಲ್ಲಿ ಮನೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪಿ.ಆರ್.ವಿಜಯ್ ಮಾತನಾಡಿ, ಪದವಿ ಪೂರ್ವ ಕಾಲೇಜು ಶಿಕ್ಷಣ ವಿದ್ಯಾರ್ಥಿಗಳ ಜೀವನ, ಭವಿಷ್ಯ ರೂಪಿಸುತ್ತದೆ ಎಂದರು.
ಪೋಷಕರು ತಮ್ಮ ಮಕ್ಕಳ ಸ್ವೇಚ್ಛಾಚಾರದ ಬಗ್ಗೆ ಸೂಕ್ಷ್ಮ ಗಮನವಿರಲಿ ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟು ಓದುವ ಮೂಲಕ ಪಿಯು ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ತರಬೇಕು ಎಂದು ಹೇಳಿದರು.
ವಿವೇಕಾನಂದ ಕಾಲೇಜು ನಿವೃತ್ತ ಪ್ರಾಂಶುಪಾಲ ಎಂ.ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ಓದಿನ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಇದರಿಂದ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.
ವಿವೇಕಾನಂದ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.
ಸಾವಯವ ಕೃಷಿಕ ಎಂ.ಬಿ ಅಫ್ತಾರ್ ,ವಿವೇಕಾನಂದ ಪಿಯು ಕಾಲೇಜು ಪ್ರಾಂಶುಪಾಲೆ,
ಕ್ಲಾರ ರೇಷ್ಮ, ಎಂಜಿಎಂ ಪದವಿ ಕಾಲೇಜು ಪ್ರಾಂಶುಪಾಲೆ ಟಿ.ಎ. ಲಿಖಿತ ಪಾಲ್ಗೊಂಡಿದ್ದರು.
ಮಡಿಕೇರಿ ಪ್ರಾಂಶುಪಾಲ ವಿಜಯ್, ಸಾವಯವ ಕೃಷಿಕ ಅಫ್ತಾಬ್, ಸೇವಾ ಭಾರತಿ ಜಿಲ್ಲಾಧ್ಯಕ್ಷ ಟಿ.ಸಿ.ಚಂದ್ರನ್ ಅವರನ್ನು ಕಾಲೇಜ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.