ಮಡಿಕೇರಿ ಡಿ.29 : ಎಲ್ಲಾ ಕೊಡವ ಸಮುದಾಯದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ವತಿಯಿಂದ ಮಡಿಕೇರಿಯಲ್ಲಿ ವಿಶ್ವ ಕೊಡವ ಸಮ್ಮೇಳನ (“ಗ್ಲೋಬಲ್ ಕೊಡವ ಸಮ್ಮಿಟ್”) ನಡೆಯಿತು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ನೂತನ ಖಾಸಗಿ ಬಸ್ ನಿಲ್ದಾಣದಿಂದ ಸಾವಿರಾರು ಸಂಖ್ಯೆಯ ಕೊಡವ ಕೊಡವತಿಯರು ತಮ್ಮ ಕುಟುಂಬದ ಹೆಸರಿರುವ ಧ್ವಜ ಹಿಡಿದು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜುವರೆಗೆ ಬೃಹತ್ ಮೆರವಣಿಗೆ ಸಾಗಿದರು.
ಕೊಡವರ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ, ಕೊಡವರು ಎದುರಿಸುತ್ತಿರುವ ಸಮಸ್ಯೆಗಳು, ಕೊಡವರ ಸಂಸ್ಕೃತಿ, ಸಂಪ್ರದಾಯ ಹಾಗೂ ಕೊಡವರ ವಿನೂತನ ಆಚರಣೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಮತ್ತು ಮುಂದಿನ ನಡೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಭಾರತ ಸರಕಾರದ ರಾಷ್ಟ್ರೀಯ ಪಠ್ಯಕ್ರಮ ಶಿಕ್ಷಣ ಸಚಿವಾಲಯದ ಮುಖ್ಯ ಸಲಹೆಗಾರ ರಶ್ಮಿ ಸಮಂತ್, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಆತ್ಮ ನಿರ್ಭರ ಅಧ್ಯಕ್ಷೆ ಕುಪ್ಪಂಡ ಛಾಯಾ ನಂಜಪ್ಪ, ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಅಧ್ಯಕ್ಷ ಶಾಂತೆಯಂಡ ನಿರನ್ ನಾಚಪ್ಪ, ಉಪಾಧ್ಯಕ್ಷ ಪಟ್ರಪಂಡ ಪಂಥ್ ಮೊಣ್ಣಪ್ಪ ಉಪಸ್ಥಿತರಿದ್ದರು.
ಜಿಲ್ಲೆ, ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶದಲ್ಲಿ ನೆಲೆಸಿರುವ ಕೊಡವ ಜನಾಂಗ ಬಾಂಧವರು ಪಾಲ್ಗೊಂಡಿದ್ದರು.