ಮಡಿಕೇರಿ ಡಿ.29 : ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ಅವರು ಕನ್ನಡ ನಾಡು-ನುಡಿಗೆ ನೀಡಿರುವ ಕೊಡುಗೆಯನ್ನು ಪ್ರತಿಯೊಬ್ಬರೂ ತಿಳಿದುಕೊಂಡು, ನಾಡಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ಹಾಗೂ ಕೊಡಗು ಜಿಲ್ಲಾ ಜಾನಪದ ಪರಿಷತ್ತು ಇವರ ಸಹಕಾರದಲ್ಲಿ ನಗರದ ಗಾಂಧಿ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ನಡೆದ ‘ವಿಶ್ವಮಾನವ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸೋಮವಾರಪೇಟೆ ಪಟ್ಟಣದ ಜಿಎಂಪಿ ಶಾಲೆಯ ಚೆನ್ನಬಸಪ್ಪ ಸಭಾಂಗಣ ಬಳಿ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆ/ ಪುತ್ಥಳಿಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಪುತ್ಥಳಿ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಪುತ್ಥಳಿ ನಿರ್ಮಾಣ ಸಂಬಂಧ ಜಾಗವು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರಲಿದ್ದು, ಜಿಲ್ಲಾಡಳಿತವು ಪುತ್ಥಳಿ ನಿರ್ಮಾಣಕ್ಕೆ ಅವಕಾಶ ಮಾಡಬೇಕು ಎಂದು ಕೋರಿದರು.
‘ಪ್ರತಿಯೊಬ್ಬರೂ ಹುಟ್ಟುವಾಗ ಇಂತಹ ಸಮಾಜದಲ್ಲಿ ಹುಟ್ಟುತ್ತೇವೆ ಎಂದು ಅರ್ಜಿ ಸಲ್ಲಿಸಿರುವುದಿಲ್ಲ, ಕುವೆಂಪು ಅವರು ಹೇಳಿದಂತೆ ಹುಟ್ಟುತ್ತ ವಿಶ್ವಮಾನವರಾಗಿ, ಬೆಳೆಯುತ್ತಾ ಅಲ್ಪ ಮಾನವರಾಗುತ್ತೇವೆ. ಆಧುನಿಕ ಯುಗದಲ್ಲಿಯೂ ಸಹ ಜಾತಿ ವ್ಯವಸ್ಥೆ ಕಡಿಮೆಯಾಗುತ್ತಿಲ್ಲ ಎಂದೆನಿಸುತ್ತದೆ ಎಂದು ಡಾ.ಮಂತರ್ ಗೌಡ ಅವರು ಹೇಳಿದರು.

ರಾಷ್ಟ್ರಕವಿ ಕುವೆಂಪು ಅವರು ಸಾರಿರುವ ವಿಶ್ವ ಮಾನವ ಸಂದೇಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡು, ಇಲ್ಲದವರ ಏಳಿಗೆಗಾಗಿ ಶ್ರಮಿಸಬೇಕಿದೆ ಎಂದು ಡಾ.ಮಂತರ್‍ಗೌಡ ಅವರು ನುಡಿದರು.
ಕುವೆಂಪು ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಪ್ರತಿಯೊಬ್ಬರೂ ವಿಶಾಲ ಮನೋಭಾವ ಬೆಳೆಸಿಕೊಂಡು ಸಮಾಜದ ಅಭಿವೃದ್ಧಿಗೆ ಪಣತೊಡಬೇಕು ಎಂದರು.
ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ರಾಷ್ಟ್ರಕವಿ ಕುವೆಂಪು ಅವರ ನಾಡಿನಲ್ಲಿ ನಾವೆಲ್ಲರೂ ಹುಟ್ಟಿರುವುದೇ ಒಂದು ಪುಣ್ಯ ಎಂದರು.
ಕುವೆಂಪು ಅವರ ಬರಹಗಳು, ಭಾಷಣಗಳು, ಕಾದಂಬರಿ, ಕವಿತೆ, ಹೀಗೆ ಪ್ರತಿಯೊಂದನ್ನು ಅಧ್ಯಯನ ಮಾಡಿದಾಗ ಕನ್ನಡ ಭಾಷೆಯ ಬಗ್ಗೆ ಅವರಿಗಿದ್ದ ಪ್ರೀತಿ, ನಾಡಿನ ಚಿತ್ರಣ ದೊರೆಯಲಿದೆ ಎಂದರು.
‘ಕುವೆಂಪು ಅವರ ಪಂಚಸೂತ್ರಗಳಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿ ಒಳಗೊಂಡಿರಬೇಕು ಎಂದು ಕುವೆಂಪು ಅವರು ಸಾರಿದ್ದಾರೆ ಎಂದು ಅವರು ಹೇಳಿದರು.’
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಕೋರನ ಸರಸ್ವತಿ ಅವರು ಮಾತನಾಡಿ ರಾಷ್ಟ್ರಕವಿ ಕುವೆಂಪು ಅವರು ಹಲವು ಕವನ ಸಂಕಲನ, 2 ರೂಪಾಂತರಗಳು ಸೇರಿ 14 ನಾಟಕಗಳನ್ನು, 2 ಬೃಹತ್ ಕಾದಂಬರಿ, ಜೊತೆಗೆ ಒಂದು ಮಹಾಕಾವ್ಯವನ್ನು, ನೂರಾರು ಲೇಖನ, ಹಾಗೆಯೇ ‘ನೆನಪಿನದೋಣಿ’ ಹೆಸರಿನ ಆತ್ಮ ಚರಿತ್ರೆ ಬರೆದಿದ್ದಾರೆ ಎಂದು ಅವರು ತಿಳಿಸಿದರು.
ಕುವೆಂಪು ಅವರು ರಚಿಸಿದ ಎರಡು ಮಹಾ ಕಾದಂಬರಿಗಳಾದ ‘ಕಾನೂರು ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಪ್ರಮುಖವಾಗಿವೆ. ಈ ಎರಡು ಕೃತಿಗಳು ಕನ್ನಡ ಸಾಹಿತ್ಯಕ ಮೌಲ್ಯವನ್ನು ಸಾರಿ ಹೇಳುತ್ತವೆ. ಮಲೆನಾಡಿನಲ್ಲಿ ನಡೆಯುವ ಈ ಕಥನಗಳು ಕುವೆಂಪು ಅವರ ನಿರೂಪಣಾ ಪ್ರತಿಭೆಗೆ ಶ್ರೇಷ್ಠ ಉದಾಹರಣೆಯಾಗಿದೆ ಎಂದು ಕೋರನ ಸರಸ್ವತಿ ಅವರು ವಿವರಿಸಿದರು.
ಜಗದಕವಿ, ಯುಗದಕವಿ ಕುವೆಂಪು ಅವರು ಸಾಹಿತ್ಯ, ಕವನಸಂಕಲನ, ಕಾದಂಬರಿ, ನಾಟಕ, ವಿಮರ್ಶೆಗಳು ಬರೆಯುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಅವರು ವರ್ಣಿಸಿದರು.
ಜನಸಾಮಾನ್ಯರನ್ನು ಶ್ರೀಸಾಮಾನ್ಯರಂತೆ ಕಾಣಬೇಕು ಎಂದು ಒತ್ತಿ ಹೇಳಿದ್ದಾರೆ. ಮಂತ್ರ ಮಾಂಗಲ್ಯ ಮೂಲಕ ಸರಳ ವಿವಾಹಕ್ಕೆ ಒತ್ತು ನೀಡಿದ್ದಾರೆ ಎಂದು ಅವರು ಕೋರನ ಸರಸ್ವತಿ ಅವರು ಪ್ರತಿಪಾದಿಸಿದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಅನಂತಶಯನ ಅವರು ಮಾತನಾಡಿ ನೂರು ದೇವರುಗಳನ್ನು ನೂಕಾಚೆ ದೂರ ಎಂದು ಕುವೆಂಪು ಅವರು ಸಾರುವ ಮೂಲಕ ವೈಚಾರಿಕತೆಗೆ ಒತ್ತು ನೀಡಿದ್ದಾರೆ. ಕುವೆಂಪು ಅವರ ಬರಹ ಹಾಗೂ ವಿಮರ್ಶೆಗಳು ಜನಮೆಚ್ಚುಗೆಗೆ ಪಾತ್ರವಾಗಿದೆ. ಕುವೆಂಪು ಅವರು ಸಂಪ್ರದಾಯವನ್ನು ವಿರೋಧಿಸಿದರು ಸಹ, ದೈವತ್ವವನ್ನು ಹೊಂದಿದ್ದರು ಎಂದು ಹೇಳಿದರು.
ಜಿ.ಪಂ.ಮಾಜಿ ಅಧ್ಯಕ್ಷರಾದ ಕೆ.ಪಿ.ಚಂದ್ರಕಲಾ ಅವರು ಮಾತನಾಡಿ ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಭಾಷೆಗೆ ನೀಡಿರುವ ಕೊಡುಗೆ ಅಪಾರ. ಕುವೆಂಪು ಅವರು ನಾಡಿನ ಆಸ್ತಿಯಾಗಿದ್ದು, ಅವರ ಚಿಂತನೆಗಳು, ಬರಹಗಳನ್ನು ಪ್ರತಿಯೊಬ್ಬರೂ ಓದಬೇಕು ಎಂದರು.
ನಗರದಲ್ಲಿನ ಕುವೆಂಪು ಅವರ ಪುತ್ಥಳಿ ನವೀಕರಣಕ್ಕೆ ಜಿಲ್ಲಾಡಳಿತ ಸ್ಪಂದಿಸಿದ್ದು, ಜಿಲ್ಲಾಡಳಿತಕ್ಕೆ ಕೃತಜ್ಞತೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ಮಾತನಾಡಿ ಕುವೆಂಪು ಅವರ ಹಾದಿಯಲ್ಲಿ ಪ್ರತಿಯೊಬ್ಬರೂ ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ, ಕುವೆಂಪು ಅವರ ಮಲೆಗಳಲ್ಲಿ ಮದುಮಗಳೂ ಕಾದಂಬರಿಯು ಮಲೆನಾಡಿನ ಚಿತ್ರಣವನ್ನೇ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮುನಿರ್ ಅಹಮ್ಮದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎಸ್.ಎನ್.ಚಂಗಪ್ಪ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಜಾನಪದ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷರಾದ ಅನಿಲ್ ಎಚ್.ಟಿ., ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಅಂಬೆಕಲ್ಲು ನವೀನ್, ಒಡಿಪಿ ಸಂಸ್ಥೆಯ ಜಾಯ್ಸ್ ಮೆನೇಜಸ್, ಇತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಸ್ವಾಗತಿಸಿದರು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಮತ್ತು ಪ್ರೇಮರಾಘವಯ್ಯ ಅವರು ನಾಡಗೀತೆ ಹಾಡಿದರು, ಮುನೀರ್ ಅಹಮ್ಮದ್ ನಿರೂಪಿಸಿದರು. ಮಣಜೂರು ಮಂಜುನಾಥ್ ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಕೆ.ಪಿ.ಚಂದ್ರಕಲಾ ಅವರು ನಗರದಲ್ಲಿರುವ ಕುವೆಂಪು ಅವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ನೆರವೇರಿಸಿದರು.








