ಮಡಿಕೇರಿ ಡಿ.30 : ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು, ಆದರೆ ಸರಕಾರಿ ಶಾಲೆಗೂ ಹೊಸ ಕಳೆಯನ್ನು ನೀಡಬಹುದೆಂದು ತೋರಿಸಿಕೊಡುವ ಮೂಲಕ ಸ್ಫೂರ್ತಿ ಯುವಕ ಸಂಘ ಮಾದರಿಯಾಗಿದೆ.
ಮಾಸಿದ ಬಣ್ಣ, ಸುತ್ತಲು ಗಿಡಗಂಟಿಗಳು, ಕಳೆ ಗುಂದಿದ ತರಗತಿಗಳು, ನೋಡಲು ಬೇಸರ ಮೂಡಿಸುತ್ತಿದ್ದ ವಾತಾವರಣದಲ್ಲಿದ್ದ ಕರ್ಣಂಗೇರಿ ಗ್ರಾಮದ ಮೊಣಕಾಲ್ಮುರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಗತಿಯನ್ನು ಕಂಡು ಬೇಸರಗೊಂಡ ಸ್ಫೂರ್ತಿ ಯುವಕ ಸಂಘದ ಪದಾಧಿಕಾರಿಗಳು ಶ್ರಮದಾನ ಮಾಡಿದರು. ಗಿಡಗಂಟಿಗಳನ್ನು ತೆಗೆದು ಶಾಲೆಯ ಸುತ್ತಲು ಶುಚಿತ್ವದ ವಾತಾವರಣವನ್ನು ಮೂಡಿಸಿದರು. ಸ್ವಂತ ಹಣದಿಂದ ಸುಮಾರು 25 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಸುಣ್ಣಬಣ್ಣ ಬಳಿದು ಶಾಲೆಗೆ ಹೊಸ ಕಳೆ ತಂದುಕೊಟ್ಟರು. ವಿದ್ಯಾ ದೇಗುಲ ಎಂದೆಂದೂ ಸುಂದರವಾಗಿರಬೇಕು, ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳು ಸಿಗಬೇಕು ಎಂದು ಸಂಘದ ಪ್ರಮುಖರು ಅಭಿಪ್ರಾಯಪಟ್ಟರು.

::: ಧನ್ಯವಾದ ಅರ್ಪಣೆ ::::
ಶ್ರಮದಾನದ ಮೂಲಕ ಶಾಲೆಗೆ ಹೊಸ ಕಳೆ ತಂದುಕೊಟ್ಟು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದ ಸ್ಫೂರ್ತಿ ಯುವಕ ಸಂಘದ ಯುವಕರಿಗೆ ಮೊಣಕಾಲ್ಮುರಿ ಸರಕಾರಿ ಶಾಲೆಯ ವತಿಯಿಂದ ಧನ್ಯವಾದ ಅರ್ಪಿಸಲಾಯಿತು. ಶಾರದಾ ಪೂಜ ಕಾರ್ಯಕ್ರಮದ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕ ವೃಂದ ನೆನಪಿನ ಕಾಣಿಕೆ ನೀಡಿ ಗೌರವಿಸಿತು.
ಯುವಕ ಸಂಘದ ಅಧ್ಯಕ್ಷ ಸುರೇಂದ್ರ, ಪ್ರಮುಖರಾದ ರವಿಚಂದ್ರ, ಮಂಜೇಶ್, ಗಿರೀಶ, ಶಾಲಾ ಮುಖ್ಯೋಪಾಧ್ಯಾರಾದ ಶಾಲಿನಿ, ಶಿಕ್ಷಕ ಸುರೇಶ್, ಅಂಗನವಾಡಿ ಕಾರ್ಯಕರ್ತೆ ಜಯಂತಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಶ್ರದ್ಧಾಭಕ್ತಿಯ ಶಾರದಾ ಪೂಜೆಯ ನಂತರ ಪ್ರಸಾದ ವಿತರಿಸಲಾಯಿತು.










