ಮಡಿಕೇರಿ ಡಿ.30 : ವಿಶ್ವದಾದ್ಯಂತ ನೆಲೆಸಿರುವ ಕೊಡವ ಸಮುದಾಯ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮಡಿಕೇರಿಯಲ್ಲಿ ನಡೆದ ವಿಶ್ವ ಕೊಡವ ಸಮ್ಮೇಳನದ ದ್ವಿತೀಯ ದಿನದ ಕಾರ್ಯಕ್ರಮದಲ್ಲಿ ವಿವಿಧ ಪೈಪೋಟಿಗಳು ಕೊಡವ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿತು. ಕೊಡವರ ವಿಶಿಷ್ಟ ಸಂಸ್ಕೃತಿ ಸಂಪ್ರದಾಯ, ಆಚಾರ ವಿಚಾರಗಳನ್ನು ಆಧುನೀಕತೆಯ ಭರಾಟೆಯ ನಡುವೆಯೂ ಉಳಿಸಿ ಬೆಳೆಸುವ ಪಣ ತೊಡಲಾಯಿತು.

ಕುಪ್ಯಚಾಲೆ ತೊಟ್ಟು, ಪೀಚೆ ಕತ್ತಿ ವಡಿಕತ್ತಿಯೊಂದಿಗೆ ಕಂಡು ಬಂದ ಕೊಡವ ಪುರುಷರು, ಆಕರ್ಷಕ ಕೊಡವ ಸಾಂಪ್ರದಾಯಿಕ ಧಿರಿಸಿನಲ್ಲಿ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಮಹಿಳೆಯರಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಆವರಣಕ್ಕೆ ವಿಶೇಷ ಮೆರುಗು ಮೂಡಿತು.
ಕನೆಕ್ಟಿಂಗ್ ಕೊಡವ ಸಂಸ್ಥೆಯಿಂದ ಆಯೋಜಿತ ವಿಶ್ವ ಕೊಡವ ಮೇಳದ ದ್ವಿತೀಯ ದಿನವಾದ ಶನಿವಾರ ಫೀ.ಮಾ.ಕಾರ್ಯಪ್ಪ ಕಾಲೇಜಿನ ಆವರಣದಲ್ಲಿ ಉಮ್ಮತ್ತಾಟ್, ಕೋಲಾಟ್, ಬೊಳಕಾಟ್ ಪೈಪೋಟಿ ಅತ್ಯಂತ ಉತ್ಸಾಹದಿಂದ ನೂರಾರು ಪ್ರೇಕ್ಷಕರ ಸಮ್ಮುಖದಲ್ಲಿ ಪ್ರದರ್ಶಿಸಲ್ಪಟ್ಟು ಗಮನ ಸೆಳೆಯಿತು.
ದುಡಿಯ ನಾದಕ್ಕೆ ತಕ್ಕಂತೆ ಕೈಯಲ್ಲಿ ಬೆತ್ತವನ್ನು ಹಿಡಿದು, ಲಾಲಿತ್ಯ ಪೂರ್ಣವಾಗಿ ಮರದ ಸುತ್ತ ಹೆಜ್ಜೆ ಹಾಕುತ್ತಾ ಪುರುಷರು ನಡೆಸಿದ ಕೋಲಾಟ್ ಗಮನ ಸೆಳೆಯಿತಾದರೆ, ಕೊಡಗಿನ ಕೊಡವರ ಕ್ಷಾತ್ರ ತೇಜವನ್ನು ಹೊರ ಹೊಮ್ಮಿಸುವಂತೆ ಮತ್ತೊಂದು ಅಂಗಣದಲ್ಲಿ ವಡಿ ಕತ್ತಿಯೊಂದಿಗೆ ನಡೆದ ‘ಕತ್ತಿಯಾಟ್’ ಅತ್ಯಂತ ಕುತೂಹಲಕಾರಿ. ಕೈಯಲ್ಲಿ ಬಿಳಿ ಬಣ್ಣದ ಚೌರಿ ಹಿಡಿದು ವಿಶೇಷ ಗತ್ತಿನೊಂದಿಗೆ ದುಡಿಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವ ‘ಚೌರಿಯಾಟ್’ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ನಾಡಿನ ವಿವಿಧೆಡೆಗಳಿಂದ ಸಾಂಪ್ರದಾಯಿಕ ಉಡುಪಿನೊಂದಿಗೆ ಹರಿದು ಬಂದ ಕೊಡವ ಸಮುದಾಯ ಬಾಂಧವರು ಕಾಲೇಜು ಆವರಣದಲ್ಲಿ ಬೆಳಗ್ಗಿನಿಂದಲೆ ಸಮಾವೇಶಗೊಂಡು, ತಮ್ಮ ತಮ್ಮ ತಂಡಗಳ ಪೈಪೋಟಿಯ ಸಂದರ್ಭ ಅವರಿಗೆ ಬೆಂಬಲ ನೀಡುತ್ತಾ ಒಟ್ಟು ವಾತಾವರಣದ ಕಳೆಯನ್ನು ಹೆಚ್ಚಿಸಿದರು.
ಐನ್ ಮನೆಯ ಸೊಬಗು- ಕೊಡವ ಸಮುದಾಯದ ಪ್ರತಿಯೊಂದು ಕುಟುಂಬ ತನ್ನದೇ ಆದ ‘ಐನ್’ ಮನೆಯನ್ನು ಹೊಂದಿದೆ. ಒಂದು ಕಾಲದಲ್ಲಿ ಅವಿಭಕ್ತ ಕುಟುಂಬಗಳು ಐನ್ ಮನೆಯಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದರೆ, ಇಂದು ವಿವಿಧ ಕಾರಣಗಳಿಂದ ಐನ್ ಮನೆಗಳು ಮರೆಯಾಗುತ್ತಿವೆ. ಹೀಗಿದ್ದೂ ಹಲ ಕುಟುಂಬಗಳ ಐನ್ ಮನೆಗಳು ಇಂದಿಗೂ ಹಾಗೆಯೇ ಉಳಿದು ಗತ ವೈಭವವನ್ನು ಸಾರುತ್ತಿವೆ. ಇಂತಹ ಐನ್ ಮನೆಯೊಂದರ ಮಾದರಿ ಕಾಲೇಜು ಆವರಣದಲ್ಲಿ ಸಜ್ಜುಗೊಂಡಿರುವುದು ವಿಶೇಷ ಆಕರ್ಷಣೆಯಾಗಿದೆ.
ಹಿರಿಯರು ತಮ್ಮ ದೈನಂದಿನ ಬದುಕಿನಲ್ಲಿ, ಕೃಷಿ ಚಟುವಟಿಕೆಗಳಲ್ಲಿ ಬಳಸುತ್ತಿದ್ದ ಸಾಮಗ್ರಿಗಳ ಅತ್ಯಪರೂಪದ ಪ್ರದರ್ಶನ ನೋಡುಗರನ್ನು ಬಹುವಾಗಿ ಆಕರ್ಷಿಸುತ್ತಿದೆ.
ವಿವಿಧ ಗೋಷ್ಠಿಗಳು- ಕೊಡವ ಸಂಸ್ಕೃತಿ, ಪರಂಪರೆಯ ಉಳಿವಿನ ಕೇಂದ್ರ ವಿಷಯದಡಿ ವಿವಿಧ ವಿಚಾರ ಗೋಷ್ಠಿಗಳು ಸಮ್ಮೇಳನದಲ್ಲಿ ನಡೆಯುವ ಮೂಲಕ, ಕೊಡವ ಸಂಸ್ಕೃತಿ, ಸಂಪ್ರದಾಯಗಳ ಸಂರಕ್ಷಣೆಗೆ ವಿಶೇಷ ಮಹತ್ವವನ್ನು ನೀಡುವಲ್ಲಿ ಯಶಸ್ವಿಯಾಯಿತು.









