ಮಡಿಕೇರಿ ಡಿ.30 : 2024 ರ ಜೂ.21 ಕ್ಕೆ ಅವಧಿ ಪೂರ್ಣಗೊಳ್ಳಲಿರುವ ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಸಲು ಸಿದ್ಧತೆ ನಡೆದಿದ್ದು, ಆ ನಿಟ್ಟಿನಲ್ಲಿ ಇದುವರೆಗೆ ಹೆಸರು ನೋಂದಾಯಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ನವೆಂಬರ್, 23 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ನವೆಂಬರ್, 23 ರಿಂದ ಡಿಸೆಂಬರ್, 09 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ. ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮೂನೆ-18 ಮತ್ತು 19 ರ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ನಿಯಮಾನುಸಾರ ಪರಿಶೀಲಿಸಿ ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಈ ಅವಧಿಯಲ್ಲಿ (ನವೆಂಬರ್, 23 ರಿಂದ ಡಿಸೆಂಬರ್, 09 ರವರೆಗೆ) ಕೊಡಗು ಜಿಲ್ಲೆಯಲ್ಲಿ ಒಟ್ಟು 245 ಮಂದಿಯ ಅರ್ಜಿ ಸ್ವೀಕರಿಸಿದ್ದು, 199 ಅರ್ಜಿಗಳನ್ನು ಅಂಗೀಕರಿಸಲಾಗಿದೆ. 15 ಅರ್ಜಿಗಳು ತಿರಸ್ಕøತಗೊಂಡಿದ್ದು, 31 ಅರ್ಜಿಗಳನ್ನು ನೈರುತ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಾಗೆಯೇ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಅವದಿಯಲ್ಲಿ (ನ.23 ರಿಂದ ಡಿಸೆಂಬರ್, 09 ರವರೆಗೆ) 707 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 616 ಅರ್ಜಿಗಳು ಅಂಗೀಕಾರವಾಗಿದೆ. 28 ಅರ್ಜಿಗಳು ತಿರಸ್ಕøತಗೊಂಡಿದ್ದು, 63 ಅರ್ಜಿಗಳನ್ನು ಬೇರೆ ಕ್ಷೇತ್ರಕ್ಕೆ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಮೂನೆ-18 ಮತ್ತು ನಮೂನೆ-19ರ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಡಾಟಾ ಎಂಟ್ರಿ ಮಾಡಿದ್ದು, ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯ ಅನುಸಾರ ಶನಿವಾರ (ಡಿಸೆಂಬರ್, 30, 2023 ರಂದು) ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರರ ಕಚೇರಿಯಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ವಿವರಿಸಿದರು.
ಒಟ್ಟಾರೆ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು ಇದುವರೆಗೆ 1174 ಮಂದಿ ಮತದಾರರು ಇದ್ದು, ಇವರಲ್ಲಿ 392 ಪುರುಷ ಮತದಾರರು, 782 ಮಹಿಳಾ ಮತದಾರರು ಇದ್ದಾರೆ. ತಾಲ್ಲೂಕುವಾರು ಗಮನಿಸಿದಾಗ ಮಡಿಕೇರಿ 391, ಸೋಮವಾರಪೇಟೆ 124, ವಿರಾಜಪೇಟೆ 175, ಕುಶಾಲನಗರ 244 ಮತ್ತು ಪೊನ್ನಂಪೇಟೆ 240 ಮತದಾರರು ಇದ್ದಾರೆ.
ಹಾಗೆಯೇ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 3616 ಮತದಾರರು ಇದ್ದು, 1549 ಪುರುಷ ಮತದಾರರು, 2066 ಮಹಿಳಾ ಮತದಾರರು ಇದ್ದಾರೆ. ಇತರೆ ಒಬ್ಬರು ಮತದಾರರು ಇದ್ದಾರೆ. ತಾಲ್ಲೂಕುವಾರು ಗಮನಿಸಿದಾಗ ಮಡಿಕೇರಿ 1100, ಸೋಮವಾರಪೇಟೆ 732, ವಿರಾಜಪೇಟೆ 580, ಕುಶಾಲನಗರ 713, ಪೊನ್ನಂಪೇಟೆ 491 ಮಂದಿ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಮತದಾರರ ಪಟ್ಟಿಯಲ್ಲಿ ಇನ್ನು ಹೆಸರು ನೋಂದಾಯಿಸದೆ ಇರುವವರು ನಿರಂತರ ಪರಿಷ್ಕರಣೆ ಅವಧಿಯಲ್ಲಿ ನಮೂನೆ-18 ಮತ್ತು ನಮೂನೆ-19 ರ ಅರ್ಜಿಗಳನ್ನು ಸಲ್ಲಿಸಿ, ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.
ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿಗಳ, ಉಪ ವಿಭಾಗಾಧಿಕಾರಿಗಳ ಮತ್ತು ಸಂಬಂಧಪಟ್ಟ ತಾಲ್ಲೂಕು ಕಚೇರಿಗಳನ್ನು ಸಂಪರ್ಕಿಸಬಹುದು. ಹಾಗೂ ತಿತಿತಿ.ಛಿeoಞಚಿಡಿಟಿಚಿಣಚಿಞಚಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿಯೂ ಮಾಹಿತಿ ಲಭ್ಯವಿದ್ದು, ಮಾಹಿತಿಯನ್ನು ಪಡೆಯಬಹುದು ಎಂದು ವೆಂಕಟ್ ರಾಜಾ ಅವರು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಚುನಾವಣಾ ಶಿರಸ್ತೆದಾರ್ ಪ್ರಕಾಶ್, ಅನಿಲ್ ಕುಮಾರ್, ಇತರರು ಇದ್ದರು.
ರಾಜಕೀಯ ಪಕ್ಷಗಳ ಮುಖಂಡ ಜೊತೆ ಚರ್ಚೆ; ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಅಂತಿಮ ಮತದಾರರ ಪಟ್ಟಿಯ ಸಂಬಂಧ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾಹಿತಿ ನೀಡಿದರು.
ಜೊತೆಗೆ ಅಂತಿಮ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರಮುಖರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ತೆನ್ನಿರಾ ಮೈನಾ(ಕಾಂಗ್ರೆಸ್), ಅಪ್ಪಣ್ಣ(ಬಿಜೆಪಿ), ಗುಲಾಬಿ ಜನಾರ್ದನ(ಜೆಡಿಎಸ್), ಕೆ.ಎಸ್.ಹರೀಶ್(ಬಿಎಸ್‍ಪಿ), ಎಚ್.ಬಿ.ರಮೇಶ್(ಸಿಪಿಐ(ಎಂ) ಇದ್ದರು.









