ಮಡಿಕೇರಿ ಡಿ.31 : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕಾರಣಕ್ಕಾಗಿ ಸಂಸದ ಪ್ರತಾಪ್ ಸಿಂಹ ಅವರ ಬಗ್ಗೆ ಆತಂಕಗೊಂಡು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಸುಬ್ರಮಣ್ಯ ಉಪಾಧ್ಯಾಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದಾಗಲೆಲ್ಲ ಪ್ರತಾಪ್ ಸಿಂಹರನ್ನು ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿರುವ ಲಕ್ಷ್ಮಣ್ ಅವರು ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಿಂದ ಈ ರೀತಿ ವರ್ತಿಸುತ್ತಿದ್ದಾರೆ. ಟಿಕೆಟ್ ಪಡೆಯುವುದು ಹಗಲುಗನಸಾಗಿದ್ದು, ಒಂದು ವೇಳೆ ಸ್ಪರ್ಧೆಗೆ ಅವಕಾಶ ದೊರೆತರೂ ಹೀನಾಯ ಸೋಲು ಅನುಭವಿಸುವುದು ಖಚಿತ. ಇದೇ ಆತಂಕದಿಂದ ಮತ್ತು ಹತಾಶೆಯಿಂದ ಪ್ರತಾಪ್ ಸಿಂಹ ಅವರನ್ನು ಟೀಕಿಸುತ್ತಾ ಜಿಲ್ಲೆಯ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ಅವಧಿಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಜನಪ್ರಿಯತೆ ಗಳಿಸಿರುವ ಸಂಸದ ಪ್ರತಾಪ್ ಸಿಂಹರ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಕಾಂಗ್ರೆಸ್ ಸರ್ಕಾರದಿಂದ ಕೊಡಗು ಜಿಲ್ಲೆಗೆ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾಳಜಿ ವಹಿಸಲಿ. ಚೆಕ್ ಬೌನ್ಸ್ ಪ್ರಕರಣವನ್ನು ಎದುರಿಸುತ್ತಿರುವ ತಮ್ಮ ಸರ್ಕಾರದ ಶಿಕ್ಷಣ ಸಚಿವರ ರಾಜೀನಾಮೆಯನ್ನು ಮೊದಲು ಪಡೆಯಲಿ ಎಂದು ಒತ್ತಾಯಿಸಿದ್ದಾರೆ.
ದೇಶದ ಕೋಟ್ಯಾಂತರ ಜನರ ಹೃದಯ ಗೆದ್ದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ನೈತಿಕತೆ ಲಕ್ಷ್ಮಣ್ ಅವರಿಗಿಲ್ಲ. ಪ್ರಧಾನಿ ಮೋದಿ ಎದುರು ಸ್ಪರ್ಧೆ ಮಾಡಲು ಕಾಂಗ್ರೆಸ್ಸಿಗರಿಗೆ ಧೈರ್ಯವಿದೆಯೇ ಎಂದು ಪ್ರಶ್ನಿಸಿರುವ ಸುಬ್ರಮಣ್ಯ ಉಪಾಧ್ಯಾಯ, ಕೊಡಗು, ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ದಾಖಲೆಯ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮೆಚ್ಚಿಸುವುದಕ್ಕಾಗಿ ಲಕ್ಷ್ಮಣ್ ಅವರು ಕೊಡಗಿನಲ್ಲಿ ಕ್ಷುಲ್ಲಕ ರಾಜಕಾರಣ ಮಾಡುವ ಅಗತ್ಯವಿಲ್ಲ. ಜಿಲ್ಲೆಯ ಜನ ಪ್ರಜ್ಞಾವಂತರಿದ್ದು, ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಶೂನ್ಯ ಆಡಳಿತದಿಂದ ಈಗಾಗಲೇ ಬೇಸತ್ತಿದ್ದಾರೆ. ಇದಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶ ತಕ್ಕ ಉತ್ತರ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.












