ಮಡಿಕೇರಿ ಡಿ.28 : ಕನ್ನಡ ನಾಡಿನ ಕೋಟ್ಯಾಂತರ ಜನರಿಗೆ ನೀರು ಒದಗಿಸುವ ಕಾವೇರಿ ನದಿಯ ತವರು ಜಿಲ್ಲೆ ಕೊಡಗು ಅಕಾಲಿಕ ಮಳೆ, ಬರಗಾಲ, ವನ್ಯಜೀವಿ ದಾಳಿ, ಜೀವಹಾನಿ, ಬೆಳೆ ನಷ್ಟ, ಆರ್ಥಿಕ ಮುಗ್ಗಟ್ಟು, ಬಗೆಹರಿಯದ ಸಮಸ್ಯೆಗಳ ನಡುವೆಯೇ ರಾಜಕೀಯ ಇತಿಹಾಸ ಸೃಷ್ಟಿಯ ವರ್ಷ 2023 ನ್ನು ಪೂರ್ಣಗೊಳಿಸಿದೆ.
ಕೊಡಗು ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಪರಿಣಾಮ ಕಾವೇರಿ ತುಂಬಿ ಹರಿಯದೆ ರಾಜ್ಯದ ಬಹುತೇಕ ಭಾಗಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಯಿತು. 2022 ರಲ್ಲಿ 140 ಇಂಚು ಮಳೆ ಕಂಡಿದ್ದ ಕೊಡಗು, 2023 ರಲ್ಲಿ ಕೇವಲ 80 ಇಂಚು ಮಳೆಗಷ್ಟೇ ತೃಪ್ತಿಪಟ್ಟುಕೊಂಡಿದೆ. ಇದರ ಪರಿಣಾಮ ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಪೊನ್ನಂಪೇಟೆ ಮತ್ತು ಕುಶಾಲನಗರ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಯಿತು. ಅಲ್ಲದೆ ರಾಜ್ಯ ಕೂಡ ಬರದ ಛಾಯೆಯನ್ನು ಅನುಭವಿಸಿತು.
ಜಿಲ್ಲೆಯ ಕೃಷಿಕ ವರ್ಗವನ್ನು ಮಳೆಯ ಕೊರತೆ ಮಾತ್ರವಲ್ಲದೆ ಅಕಾಲಿಕ ಮಳೆಯೂ ಕಾಡಿತು. ಅನಿರೀಕ್ಷಿತ ಮಳೆಯಿಂದ ಕಾಫಿ ಮತ್ತು ಭತ್ತದ ಬೆಳೆಗಾರರು ನಷ್ಟ ಅನುಭವಿಸಿದರು. ಮಳೆ ಕೊರತೆಯಿಂದ 9791 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಮತ್ತು ಜೋಳದ ಬೆಳೆಗೆ ಹಾನಿಯಾಗಿ 838 ಲಕ್ಷ ರೂ. ನಷ್ಟ ಸಂಭವಿಸಿತು.
::: ವನ್ಯಜೀವಿಯಿಂದ ನಷ್ಟ :::
ಹುಲಿ ಮತ್ತು ಕಾಡಾನೆಗಳ ದಾಳಿ ಈ ವರ್ಷವೂ ಜಿಲ್ಲೆಯನ್ನು ಆತಂಕದಲ್ಲಿ ಮುಳುಗಿಸಿತು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಡಾನೆಗಳು ಕಾಫಿ ತೋಟಗಳನ್ನೇ ಆವಾಸ ಸ್ಥಾನವನ್ನಾಗಿ ಮಾಡಿಕೊಂಡವು. ದಕ್ಷಿಣ ಕೊಡಗನ್ನು ಅತಿಯಾಗಿ ಕಾಡಿದ ಹುಲಿಗಳು ಹಸು, ಹಂದಿ, ಮೇಕೆಗಳೊಂದಿಗೆ ಮಾನವ ಜೀವವನ್ನೂ ತೆಗೆಯಿತು. ಕಾಡಾನೆಗಳು ಕಾಫಿ, ಭತ್ತ, ಅಡಿಕೆ, ಬಾಳೆ ಕೃಷಿಗೆ ಹಾನಿ ಉಂಟು ಮಾಡಿದವು.
ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿ ಗಿರೀಶ್ (35) ಎಂಬುವವರು ಸುಂಟಿಕೊಪ್ಪ ಸಮೀಪ ಕೆದಕಲ್ ನಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟರು.
ಸೋಮವಾರಪೇಟೆಯ ಅಡಿಯನಾಡೂರು ಗ್ರಾಮದ ಈರಪ್ಪ (60), ಸಿದ್ದಾಪುರದ ಐಶಾ (62), ಅರೆಕಾಡು ನೇತಾಜಿ ಗ್ರಾಮದ ದೇವಪ್ಪ (60), ಕೊಡ್ಲಿಪೇಟೆಯ ಶಾಂತಪುರ ಗ್ರಾಮದ ಕುಮಾರ (40) ಹಾಗೂ ಪಾಲಿಬೆಟ್ಟದ ಬಾಬಿ ಕಾಡಾನೆ ದಾಳಿಯಿಂದ ಸಾವನ್ನಪ್ಪಿದರು.
::: ಹುಲಿ ಸೆರೆ- ಸಾವು :::
ಹುಲಿದಾಳಿಗೆ ಸಿಲುಕಿ ದಕ್ಷಿಣ ಕೊಡಗಿನ ಕುಟ್ಟ ಚೂರಿಕಾಡು ಗ್ರಾಮದ ಪಂಚಳ್ಳಿಯಲ್ಲಿ ಕಾರ್ಮಿಕ ಚೇತನ್ (18) ಹಾಗೂ ಬಾಡಗ ಗ್ರಾಮದಲ್ಲಿ ಕಾರ್ಮಿಕ ರಾಜು (75) ಎಂಬುವವರು ಮೃತಪಟ್ಟರು.
ಇಬ್ಬರನ್ನು ಬಲಿ ಪಡೆದ ಹುಲಿಯನ್ನು ಕುಟ್ಟ ಗ್ರಾಮದ ನಾಣಚ್ಚಿ ಎಂಬಲ್ಲಿ ಸೆರೆ ಹಿಡಿಯಲಾಯಿತು. ಮಾಲ್ದಾರೆಯ ಅವರೆಗುಂದ ಎಂಬಲ್ಲಿ ನಿತ್ರಾಣಗೊಂಡಿದ್ದ 12 ವರ್ಷದ ಹುಲಿಯೊಂದನ್ನು ಸೆರೆ ಹಿಡಿದು ಮೈಸೂರಿನ ಕೂರ್ಗಳ್ಳಿಗೆ ಸ್ಥಳಾಂತರಿಸಲಾಯಿತು. ಕಾದಾಟದಲ್ಲಿ ಗಾಯಗೊಂಡಿದ್ದ ಹುಲಿಯೊಂದು ಮಾಲ್ದಾರೆಯ ಆಸ್ಥಾನ ಹಾಡಿ ಸಮೀಪ ಸಾವನ್ನಪ್ಪಿತು.
::: ಕಾಡಾನೆಗಳ ಸೆರೆ- ಸಾವು :::
ಅತ್ತೂರು ನಲ್ಲೂರು ಗ್ರಾಮದಲ್ಲಿ ಸೆರೆ ಸಿಕ್ಕ 20 ವರ್ಷದ ಕಾಡಾನೆಯೊಂದು ಸ್ಥಳಾಂತರಿಸುವ ಸಂದರ್ಭ ಮೃತಪಟ್ಡಿತು. ವಿರಾಜಪೇಟೆಯ ಅಮ್ಮತ್ತಿ ಒಂಟಿಯಂಗಡಿಯಲ್ಲಿ 32 ವರ್ಷದ ಕಾಡಾನೆ, ಮಡಿಕೇರಿಯ ಅರೆಕಾಡು ಗ್ರಾಮದಲ್ಲಿ 16 ವರ್ಷದ ಕಾಡಾನೆ ಹಾಗೂ ಕೆದಕಲ್ ಸಮೀಪ ಅರಣ್ಯ ಸಿಬ್ಬಂದಿಯನ್ನು ಬಲಿ ಪಡೆದ 18 ವರ್ಷದ ಕಾಡಾನೆಯನ್ನು ಸೆರೆ ಹಿಡಿಯಲಾಯಿತು.
ಶನಿವಾರಸಂತೆಯ ಎಳನೀರು ಗುಂಡಿ ಎಂಬಲ್ಲಿ ನೀರಿನ ತೊಟ್ಟಿಗೆ ಬಿದ್ದು, 20 ವರ್ಷದ ಕಾಡಾನೆ ಮೃತಪಟ್ಟಿತು. ಕುಟ್ಟ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಷಗೊಂಡು ಕಾಡಾನೆ ಸಾವನ್ನಪ್ಪಿತು. ಸುಂಟಿಕೊಪ್ಪದ ಕಂಬಿಬಾಣೆ ಗ್ರಾಮದ ತೋಟವೊಂದರಲ್ಲಿ ಕಾಡಾನೆಯ ಮೃತದೇಹ ಪತ್ತೆಯಾಯಿತು. ಹಾರಂಗಿ ಹಿನ್ನೀರಿನ ಸಜ್ಜಳ್ಳಿ ಗ್ರಾಮದಲ್ಲಿ ಕುರುಡು ಕಾಡಾನೆಯೊಂದು ಮೃತಪಟ್ಟಿತು.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ವನ್ಯಜೀವಿ ಹಾಗೂ ಮಾನವರ ನಡುವಿನ ಸಂಘರ್ಷ ಮುಂದುವರೆದಿದ್ದು, ಮಾನವರು ಮಾತ್ರವಲ್ಲ ವನ್ಯಜೀವಿಗಳು ಕೂಡ ಪ್ರಾಣ ಕಳೆದುಕೊಂಡವು. ವನ್ಯಜೀವಿ ದಾಳಿ ತಡೆಗೆ ಶಾಶ್ವತ ಪರಿಹಾರ ಸೂಚಿಸುವಂತೆ ಕೇಳಿ ಬರುತ್ತಿರುವ ಜನರ ಒತ್ತಾಯ ಅರಣ್ಯ ರೋಧನವಾಗಿಯೇ ಉಳಿದಿದೆ.
::: ರಾಜಕೀಯ ಇತಿಹಾಸ ಸೃಷ್ಟಿ :::
ಬಿಜೆಪಿಯ ಭದ್ರಕೋಟೆ ಎಂದೇ ಪ್ರಚಾರ ಪಡೆದಿದ್ದ ಕೊಡಗು 2023ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿತು. ಕಳೆದ 25 ವರ್ಷಗಳಿಂದ ಬಿಜೆಪಿಯ ಹಿಡಿತದಲ್ಲಿದ್ದ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿತು. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಡಾ.ಮಂತರ್ ಗೌಡ ಅವರು ಮಾಜಿ ಸಚಿವ ಬಿಜೆಪಿಯ ಎಂ.ಪಿ.ಅಪ್ಪಚ್ಚುರಂಜನ್ ಅವರನ್ನು 4402 ಮತಗಳ ಅಂತರದಿಂದ ಸೋಲಿಸಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಎ.ಎಸ್.ಪೊನ್ನಣ್ಣ ಅವರು ಮಾಜಿ ಸ್ಪೀಕರ್ ಬಿಜೆಪಿಯ ಕೆ.ಜಿ.ಬೋಪಯ್ಯ ಅವರಿಗೆ 4291 ಮತಗಳ ಅಂತರದಿಂದ ಸೋಲಿನ ರುಚಿ ತೋರಿಸಿದರು. ಆ ಮೂಲಕ ಜಿಲ್ಲೆಯಲ್ಲಿ ಬಿಜೆಪಿಯ ಭದ್ರಕೋಟೆ ಚಿದ್ರವಾಗಿ ಕಾಂಗ್ರೆಸ್ ಅಧಿಕಾರ ಮತ್ತೆ ಆರಂಭಗೊಂಡಿದೆ.
::: ಭ್ರಷ್ಟಾಚಾರ ನಿರ್ಮೂಲನೆ :::
ತಮ್ಮ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ಎಂದು ಶಾಸಕದ್ವಯರು ಭರವಸೆ ನೀಡಿದಂತೆ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇ ಗೌಡ ಸೇರಿದಂತೆ ಕೆಲವು ಅಧಿಕಾರಿಗಳು ಅಮಾನತುಗೊಂಡು ಮನೆ ಸೇರಿದರು. ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ತಡೆಗೋಡೆ ಕಳಪೆಯಾದ ಕಾರಣ ಅಭಿಯಂತರರನ್ನು ಅಮಾನತುಗೊಳಿಸಲಾಯಿತು.
::: ಕೊಡವ ಲ್ಯಾಂಡ್ ಗಾಗಿ ಹೋರಾಟ :::
ಪ್ರತ್ಯೇಕ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಗಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಹೋರಾಟವನ್ನು ತೀವ್ರಗೊಳಿಸಿತು. ಜಿಲ್ಲೆಯ ವಿವಿಧೆಡೆ ಐದು ಹಂತಗಳಲ್ಲಿ ಪಾದಯಾತ್ರೆ ನಡೆಸಿ ಜನಜಾಗೃತಿ ಮೂಡಿಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿತು. ಸರ್ಕಾರಿ ದಾಖಲೆಗಳಲ್ಲಿ “ಕೊಡಗರು” ಎಂದು ಇರುವ ಪದವನ್ನು ಕಾನೂನು ಹೋರಾಟದ ಮೂಲಕ “ಕೊಡವ” ಎಂದು ನಮೂದಿಸಲು ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸುವಲ್ಲಿ ಸಿಎನ್‍ಸಿ ಸಂಘಟನೆ ಯಶಸ್ವಿಯಾಯಿತು.
::: ಅತಿ ಹೆಚ್ಚು ಮಾದಕ ವಸ್ತುಗಳು ವಶ :::
ಕೊಡಗು ಪೊಲೀಸ್ ಇಲಾಖೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರ ನೇತೃತ್ವದಲ್ಲಿ ದೊಡ್ಡ ಅಭಿಯಾನದ ರೂಪದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯ ವಿರುದ್ಧ ಕಾರ್ಯಾಚರಣೆ ನಡೆಸಿತು. ಅತಿ ಹೆಚ್ಚು ಗಾಂಜಾ ಮತ್ತು ಎಂಡಿಎಂಎ ಯನ್ನು ವಶಕ್ಕೆ ಪಡೆದ ಪೊಲೀಸರು ಅಸಂಖ್ಯಾತ ಆರೋಪಿಗಳನ್ನು ಬಂಧಿಸಿದರು. ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ನಿಯಂತ್ರಣದಲ್ಲಿತ್ತು, ಅಲ್ಲದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ಶೀಘ್ರ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.
ಆತ್ಮಹತ್ಯೆ ಮಾಡಿಕೊಂಡ ಮಡಿಕೇರಿಯ ಮಾಜಿ ಯೋಧ ಸಂದೇಶ್ ಅವರ ಹನಿಟ್ರ್ಯಾಪ್ ಪ್ರಕರಣ ಹಾಗೂ ಕೇರಳ ಗಡಿಯಲ್ಲಿ ನಡೆದ 50 ಲಕ್ಷ ರೂ. ದರೋಡೆ ಪ್ರಕರಣ ಹೆಚ್ಚು ಚರ್ಚೆಗೆ ಗ್ರಾಸವಾಯಿತು ಮತ್ತು ಆರೋಪಿಗಳನ್ನು ಬಂಧಿಸಲಾಯಿತು.
::: ರಾಣಿ ಮಾಚಯ್ಯಗೆ ಪದ್ಮಶ್ರೀ :::
ಜಿಲ್ಲೆಯ ಜಾನಪದ ಕಲಾವಿದೆ ರಾಣಿ ಮಾಚಯ್ಯ ಅವರು ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾದರು. ಲೆಫ್ಟಿನೆಂಟ್ ಜನರಲ್ ಕೋದಂಡ ಕಾರ್ಯಪ್ಪ ಅವರಿಗೆ ರಾಜ್ಯ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ ಚಿತ್ರರಂಗದ ನಟ ಕೊಡಗಿನ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
::: ಪ್ರವಾಸೋದ್ಯಮಕ್ಕೆ ನಷ್ಟ :::
ಹಾವಾಗುಣದ ವೈಪರೀತ್ಯ ಮತ್ತು ವನ್ಯಜೀವಿಗಳ ದಾಳಿಯಿಂದ ಬೇಸರಗೊಂಡಿರುವ ಕೊಡಗಿನ ಕೃಷಿಕರು ಪ್ರವಾಸೋದ್ಯಮದ ಕಡೆ ಮುಖ ಮಾಡಿದ್ದಾರೆ. ಆದರೆ 2023 ಪ್ರವಾಸೋದ್ಯಮವನ್ನು ನಂಬಿರುವವರಿಗೆ ಹೆಚ್ಚು ಲಾಭ ತಂದುಕೊಡಲಿಲ್ಲ. ನಿರೀಕ್ಷಿತ ಮಟ್ಟದ ಪ್ರವಾಸಿಗರ ಆಗಮನವಾಗದೆ ನಿರಾಶೆಯಲ್ಲಿದ್ದ ಮಂದಿಗೆ ವರ್ಷಾಂತ್ಯದ ಡಿಸೆಂಬರ್ ಕೊಂಚ ನೆಮ್ಮದಿ ತಂದಿದೆ.













