ಸೋಮವಾರಪೇಟೆ ಜ.1 : ಕರ್ನಾಟಕ ರಾಜ್ಯ ಟ್ಯಾಕ್ಷಿ ಡ್ರೈವರ್ಸ್ ಅಸೋಶಿಯೇಷನ್‍ನ ತಾಲ್ಲೂಕು ಘಟಕದ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಎರಡನೇ ವರ್ಷದ ಮುಕ್ತ ನೃತ್ಯ ಸ್ಪರ್ಧೆ ನಡೆಸಲಾಗುವುದು ಎಂದು ಅಧ್ಯಕ್ಷ ಬಿ.ವಿ. ರವಿ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ.26ರಂದು ಖಾಸಗಿ ಬಸ್ ನಿಲ್ದಾಣದಲ್ಲಿ ವೇದಿಕೆಯನ್ನು ನಿರ್ಮಿಸಿ, ಕಾರ್ಯಕ್ರಮ ಮಾಡಲಾಗುವುದು. ಮಧ್ಯಾಹ್ನ 1ಕ್ಕೆ ವಿಶ್ವರೂಪ ಕಲಾತಂಡದ ವತಿಯಿಂದ ರಸಮಂಜರಿ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ನಂತರ ಸಾರ್ವಜನಿಕರಿಗೆ ಅನ್ನದಾನ ಕಾರ್ಯಕ್ರಮ ನಡೆಯುವುದು ಎಂದು ತಿಳಿಸಿದರು.ಮಧ್ಯಾಹ್ನ 3ಕ್ಕೆ 14 ವರ್ಷದೊಳಗಿನ ಮಕ್ಕಳಿಗೆ ನೃತ್ಯ ಸ್ಪರ್ಧೆ ನಡೆಸಲಾಗುವುದು. ವಿಜೇತ ತಂಡಕ್ಕೆ ರೂ. 6 ಸಾವಿರ ರೂ, ದ್ವಿತೀಯ ಸ್ಥಾನಗಳಿಸಿದ ತಂಡಕ್ಕೆ ರೂ. 5 ಸಾವಿರ ಹಾಗೂ ತೃತೀಯ ಸ್ಥಾನ ಗಳಿಸಿದ ತಂಡಕ್ಕೆ ರೂ. 4 ಸಾವಿರ ನಗದಿನೊಂದಿಗೆ ಆಕರ್ಷಕ ಟ್ರೋಫಿ ಹಾಗೂ ಭಾಗವಹಿಸಿದ ಎಲ್ಲ ತಂಡಕ್ಕೂ ಸಮಾದಾನಕರ ಬಹುಮಾನ ನೀಡಲಾಗುವುದು ಎಂದರು.
ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ತಾಲ್ಲೂಕು ಘಟಕದಿಂದ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗುವುದು. ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಪದವಿ ಶಿಕ್ಷಣದಲ್ಲಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಗುವುದು. ಕಾರ್ಯಕ್ರಮಕ್ಕೆ ರಾಮನಗರ ಜಿಲ್ಲೆಯ ಗೆಜ್ಜೆಗಾರು ಗುತ್ತೆ ಮಠದ ಶ್ರೀ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಘಟಕದ ಅಧ್ಯಕ್ಷ ರವಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಮಂತರ್ ಗೌಡ, ಮಾಜಿ ಶಾಸಕ ಅಪ್ಪಚ್ಚು ರಂಜನ್, ಕರ್ನಾಟಕ ರಾಜ್ಯ ಟ್ಯಾಕ್ಷಿ ಡ್ರೈವರ್ಸ್ ಅಸೋಶಿಯೇಷನ್‍ನ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಕುಂದಾಪುರ, ಜಿಲ್ಲಾಧ್ಯಕ್ಷ ಎಂ.ಜೆ. ವಿನೋದ್ ಹಾಜರಿದ್ದರು.
ರಾತ್ರಿ ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9449273010 ಅಥವಾ 0072707718 ಸಂಪರ್ಕಿಸಲು ಮನವಿ ಮಾಡಿದ್ದಾರೆ.
ಗೋಷ್ಠಿಯಲ್ಲಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಪ್ರಸನ್ನ, ಖಜಾಂಚಿ ಕೆ.ಎನ್. ದೀಪಕ್, ಸಹಕಾರ್ಯದರ್ಶಿ ಭರತ್ ಹಾಗೂ ಸಂಘಟನಾ ಕಾರ್ಯದರ್ಶಿ ರಾಮಕೃಷ್ಣ ಇದ್ದರು.








