ಮಡಿಕೇರಿ ಜ.6 : ಹುಬ್ಬಳ್ಳಿಯಲ್ಲಿ ಕರಸೇವಕರನ್ನು ಬಂಧಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಪೊಲೀಸರ ಕ್ರಮವನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಡಿವೈಎಸ್‌ಪಿ ಕಚೇರಿ ಎದುರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, “ನಾನು ರಾಮಭಕ್ತ ನನ್ನನ್ನು ಕೂಡ ಬಂಧಿಸಿ” ಎಂದು ಘೋಷಣೆಗಳನ್ನು ಕೂಗಿದರು.
ರಾಮ ಜನ್ಮಭೂಮಿ ಹೋರಾಟದ ಹಳೆಯ ಪ್ರಕರಣಗಳಿಗೆ ಮರುಜೀವ ನೀಡುವ ಮೂಲಕ ಹುಬ್ಬಳ್ಳಿಯಲ್ಲಿ ರಾಮಭಕ್ತರನ್ನು ಬಂಧಿಸಿರುವ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ಸಮಾಜ ಘಾತುಕ ಮತಾಂಧ ಸಂಘಟನೆಗಳ ಅಪರಾಧ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವ ಸರ್ಕಾರ ಹಿಂದೂಗಳ ವಿಚಾರದಲ್ಲಿ ಭಾವನೆಗಳನ್ನು ಕೆಣಕುತ್ತಿದೆ. ಕಾಂಗ್ರೆಸ್ ಪಕ್ಷದ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ಕೋಮು ಪ್ರಚೋದನೆಯ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವೇದಿಕೆಯ ಪ್ರಮುಖರು ಆರೋಪಿಸಿದರು.
ಶ್ರೀರಾಮ ಮಂದಿರಕ್ಕಾಗಿ ಹೋರಾಡಿದ ರಾಮಭಕ್ತರನ್ನು ಮಂದಿರ ಉದ್ಘಾಟನೆಯ ಶುಭ ಸಂದರ್ಭದಲ್ಲೇ ಬಂಧಿಸುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರ ಕಾನೂನು ಮೀರಿ ವರ್ತಿಸುತ್ತಿದ್ದು, ಹಿಂದೂಗಳ ವಿರುದ್ಧದ ಧೋರಣೆ ಹೀಗೆ ಮುಂದುವರೆದರೆ ಹಿಂದೂ ಜಾಗರಣಾ ವೇದಿಕೆ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ವೇದಿಕೆಯ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್ ಎಚ್ಚರಿಕೆ ನೀಡಿದರು.
ವೇದಿಕೆ ಸಹ ಸಂಚಾಲಕ ಚೇತನ್ ಶಾಂತಿನಿಕೇತನ, ನಗರ ಸಂಚಾಲಕ ದುರ್ಗೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಪ್ರಧಾನ ಕಾರ್ಯದರ್ಶಿ ನಾಪಂಡ ಕಾಳಪ್ಪ, ನಗರಾಧ್ಯಕ್ಷ ಮನು ಮಂಜುನಾಥ್, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್, ಸದಸ್ಯ ಕಾಳಚಂಡ ಅಪ್ಪಣ್ಣ, ಪ್ರಮುಖರಾದ ಬಿ.ಕೆ.ಜಗದೀಶ್, ರಮೇಶ್ ಹೊಳ್ಳ, ಕನ್ನಂಡ ಸಂಪತ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.