ಸೋಮವಾರಪೇಟೆ ಜ.11 : ‘ಕೊಡವ ಲ್ಯಾಂಡ್’ ಬೇಡಿಕೆ ರಾಜ್ಯಾಂಗದ ಆರನೇ ಶೆಡ್ಯೂಲ್ ಅನ್ವಯ ಸ್ಥಾಪನೆಯಾದಲ್ಲಿ, ಜಿಲ್ಲೆಯ ಇತರೆ ಜನಾಂಗದವರು ಕಡೆಗಣಿಸಲ್ಪಡುವ ಆತಂಕ ವಿವಿಧ ಜನಾಂಗದ ಪ್ರಮುಖರ ಸಭೆಯಲ್ಲಿ ವ್ಯಕ್ತವಾಯಿತು.
ಕೊಡವ ಲ್ಯಾಂಡ್ ವಿರುದ್ಧ ಜಿಲ್ಲಾ ಸೌಹಾರ್ದ ವೇದಿಕೆ ವತಿಯಿಂದ ಇಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಗುರುವಾರ ಕರೆಯಲಾಗಿದ್ದ ಸಭೆಯಲ್ಲಿ ವೇದಿಕೆಯ ಪ್ರಮುಖರಾದ ಎಸ್.ಎಂ. ಚಂಗಪ್ಪ ಮಾತನಾಡಿ, ಕೊಡವ ಸ್ವಾಯತ್ತ ಜಿಲ್ಲಾ ಕೌನ್ಸಿಲ್ ಸ್ಥಾಪನೆಯಾದರೆ, ಇತರೆಲ್ಲ ಜನಾಂಗದವರು ಕಡೆಗಣಿಸಲ್ಪಡುವ ಸಾಧ್ಯತೆ ಇರುವುದರೊಂದಿಗೆ, ಮತ್ತೆ ಅದರ ವಿರುದ್ಧ ಹೋರಾಟ ನಡೆಸಬೇಕಾದ ಅನಿವಾರ್ಯತೆ ಮೂಡಬಹುದೆಂದು ಎಚ್ಚರಿಕೆಯ ನುಡಿಗಳನ್ನಾಡಿದರು.
ಕೊಡವ ನ್ಯಾಷನಲ್ ಕೌನ್ಸಿಲ್‍ನ ಪ್ರಮುಖರು ಸ್ವಾಯತ್ತ ಜಿಲ್ಲೆ ಸ್ಥಾಪನೆಗೆ ಈಗಾಗಲೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕಳೆದ ಮಾ.15ರಂದು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಕರ್ನಾಟಕ ಸರ್ಕಾರ, ಕೇಂದ್ರ ಗೃಹ ಇಲಾಖೆ, ಕಾನೂನು ಇಲಾಖೆಯನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಇನ್ನು ಇತರ ಜನಾಂಗದವರು ಮೌನಕ್ಕೆ ಶರಣಾದರೆ, ಮುಂದಿನ ಪೀಳಿಗೆಗೆ ಸಂಕಷ್ಟ ಎದುರಾಗಲಿದೆಯೆಂದು ಎಚ್ಚರಿಸಿದರು.
6ನೇ ಶೆಡ್ಯೂಲ್‍ನಲ್ಲಿ ಅಸ್ಸಾಂ, ಮಿಜೋರಾಂ, ಮೇಘಾಲಯ, ತ್ರಿಪುರ ವಾಸವಿರುವ ಪರಿಶಿಷ್ಟ ಪಂಗಡದವರಿಗೆ ಸ್ವಾಯತ್ತತೆ ನೀಡಿರುವ ಹಾಗೇ ವಿಶಿಷ್ಟ ಕಲೆ, ಭಾಷೆ, ಉಡುಗೆ ತೊಡುಗೆ, ಸಂಸ್ಕೃತಿಯನ್ನು ಹೊಂದಿರುವ ಕೊಡವ ಜನಾಂಗಕ್ಕೆ ರಕ್ಷಣೆ ಮಾಡಲು ಡಿಸ್ಟ್ರಿಕ್ ಆಟೋನೋಮಸ್ ಕೌನ್ಸಿಲ್(ಎಡಿಸಿ) ಸ್ಥಾಪನೆಯಾಗಬೇಕು. ಅಲ್ಲದೆ ಕೊಡವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಬೇಡಿಕೆ ಇದೆ. ಆದರೆ, ಕೊಡವ ಸ್ವಾಯತ್ತ ಲ್ಯಾಂಡ್ ಸ್ಥಾಪನೆಯಾದರೆ ಜಿಲ್ಲೆಯಲ್ಲಿರುವ ಜನಾಂಗಗಳ ನಡುವೆ ಸಮಸ್ಯೆಗಳು ತಲೆದೋರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಇತರ ಜನಾಂಗದವರು ಒಟ್ಟಾಗಿ ಶಾಂತಿಯುತ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಸೌಹರ್ದ ವೇದಿಕೆ ಪ್ರಮುಖರಾದ ವಿ.ಪಿ.ಶಶಿಧರ್ ಮಾತನಾಡಿ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಬಲಾಢ್ಯರಾಗಿರುವ ಕೊಡವ ಜನಾಂಗ ಬುಡಕಟ್ಟು ಜನಾಂಗಕ್ಕೆ ಸೇರ್ಪಡೆಗೊಂಡು, ಪರಿಶಿಷ್ಟ ಪಂಗಡಗಳ ಸ್ವಾಯತ್ತ ಜಿಲ್ಲೆ ಸ್ಥಾಪನೆಯಾದರೆ, ನಿಜವಾದ ಬುಡಕಟ್ಟು ಜನಾಂಗ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ಅಭಿಪ್ರಾಯಿಸಿದರು.
ಡಿಸ್ಟ್ರಿಕ್ ಆಟೋನೋಮಸ್ ಕೌನ್ಸಿಲ್ ಇಲ್ಲವೆ ಎಡಿಸಿಯಲ್ಲಿ ತಮಗೆ ಅನುಕೂಲಕರವಾದ ಕಾನೂನು, ಕಾಯ್ದೆಗಳನ್ನು ರೂಪಿಸುವ ಕಾರ್ಯಾಂಗದ ಅಧಿಕಾರ ಇರುತ್ತದೆ. ಆಯಾ ಎಡಿಸಿಗಳಲ್ಲಿ ಸಂಪನ್ಮೂಲ, sಹರಿಯುವ ನದಿ ನೀರು, ಅರಣ್ಯ, ಗಣಿಗಾರಿಕೆ ಮೇಲೆ ಎಲ್ಲಾ ಹಕ್ಕುಗಳನ್ನು ಹೊಂದಿರುತ್ತಾರೆ. ಅವರಿಗೆ ಇಷ್ಟವಾದ ಭಾಷೆಯಲ್ಲಿ ವಿದ್ಯಾಭ್ಯಾಸ ನೀಡುವ ಅವಕಾಶವಿದೆ. ಎಡಿಸಿ ಅಂದರೆ ಒಂದು ಮಿನಿ ರಾಜ್ಯವಾಗಿರುತ್ತದೆ ಎಂದು ಶಶಿಧರ್ ವಿಶ್ಲೇಷಿಸಿ, ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಹೋರಾಟ ಮಾಡಲೇಬೇಕಾಗಿದೆ ಎಂದು ಹೇಳಿದರು.
ಜಾಗೃತಿಗೆ ಕ್ರಮ-ಸೌಹಾರ್ದ ವೇದಿಕೆಯ ಸೋಮವಾರಪೇಟೆ ಘಟಕದ ಸಂಚಾಲಕರಾಗಿ ಪಿ.ಕೆ.ರವಿ ಅವರನ್ನು ಆಯ್ಕೆ ಮಾಡಲಾಯಿತು. ವಿವಿಧ ಜನಾಂಗದ 18 ಮಂದಿಯನ್ನು ಸಮಿತಿ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು. ಎಲ್ಲಾ ಗ್ರಾಮಗಳ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷರುಗಳನ್ನು ಸೌಹಾರ್ದ ಸಮಿತಿಗೆ ಆಯ್ಕೆ ಮಾಡಿಕೊಳ್ಳಬೇಕು. ಪ್ರತಿಗ್ರಾಮಗಳಲ್ಲಿ ಜಾಗೃತಿ ಸಭೆಗಳನ್ನು ನಡೆಸಲು ಮಡಿಕೇರಿಯಲ್ಲಿ ಎಲ್ಲಾ ಜನಾಂಗದವರು ಸೇರಿ ಸಮಾವೇಶ ನಡೆಸಿ, ಕೊಡವ ಲ್ಯಾಂಡ್ ವಿರುದ್ಧ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.