ಬೆಳಗಾವಿ ಜ.16 : ಸೈನಿಕ ಶಾಲೆಯಲ್ಲಿ ಕನ್ನಡದವರಿಗೆ ಶೇ.65 ರಷ್ಟು ಸೀಟುಗಳನ್ನು ಹಾಗೂ ಇತರರಿಗೆ ಶೇ.35 ರಷ್ಟು ಸೀಟುಗಳು ಹಂಚಿಕೆಯಾಗಬೇಕೆಂದು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅವರು, ಬೈಲಹೊಂಗಲ ತಾಲ್ಲೂಕಿನಲ್ಲಿ ಸೈನಿಕ ಶಾಲೆ ಉದ್ಘಾಟನೆಗೆ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು. ಸೈನಿಕ ಶಾಲೆಯಲ್ಲಿ ಕನ್ನಡದವರಿಗೆ ಸೀಟುಗಳನ್ನು ಶೇ.65 ರಷ್ಟು ಹಾಗೂ ಇತರರಿಗೆ ಶೇ.35 ರಷ್ಟು ಸೀಟುಗಳು ಹಂಚಿಕೆಯಾಗಬೇಕೆಂದು ಕ್ರಮ ಕೈಗೊಳ್ಳಲಾಗಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ದೇಶಪ್ರೇಮವನ್ನು ಮಕ್ಕಳಲ್ಲಿ ಬೆಳೆಸಲಾಗುವುದು. ಇಲ್ಲಿ ಕಲಿತವರು ಸೇನೆಗೆ ಸೇರ್ಪಡೆಯಾಗುವ ಅವಕಾಶವಿದೆ ಎಂದರು.
ಸುಮಾರು 110 ಎಕರೆ ಜಮೀನನ್ನು ಸರ್ಕಾರದ ವತಿಯಿಂದ ರಾಕ್ ಗಾರ್ಡನ್ ಮತ್ತು ವಸ್ತುಸಂಗ್ರಹಾಲಯ ನಿರ್ಮಾಣಕ್ಕಾಗಿ ಅನುದಾನವನ್ನೂ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ನೀಡಲಾಗಿತ್ತು. ಮುಖ್ಯಮಂತ್ರಿಯಾಗಿ ಶಂಕುಸ್ಥಾಪನೆ ಮಾಡಿ, ಉದ್ಘಾಟನೆಯನ್ನೂ ಮಾಡುತ್ತಿದ್ದೇನೆ. ಎಲ್ಲವೂ ಉತ್ತಮವಾಗಿ ಮೂಡಿಬಂದಿದೆ. ರಾಯಣ್ಣ ಅವರ ಜ್ಞಾಪಕಾರ್ಥವಾಗಿ ಇಲ್ಲಿ ರಾಕ್ ಗಾರ್ಡನ್ ಮತ್ತು ವಸ್ತು ಸಂಗ್ರಹಾಲಯ ನಿರ್ಮಾಣವಾಗಿದೆ ಎಂದು ತಿಳಿಸಿದರು.