ಮಡಿಕೇರಿ ಜ.24 NEWS DESK : ಗ್ರಾಮ ಪಂಚಾಯ್ತಿ ನೌಕರರಿಗೆ ಕನಿಷ್ಟ ವೇತನ ನಿಗಧಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಸಂಘ ಕೊಡಗು ಜಿಲ್ಲಾ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಂಘದ ಪದಾಧಿಕಾರಿಗಳು ಹಾಗೂ ಗ್ರಾ.ಪಂ ನೌಕರರು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.
ಈ ಸಂದರ್ಭ ಸಮಿತಿ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ಗ್ರಾ.ಪಂ ಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ 31 ಸಾವಿರ ರೂ.ಗಳನ್ನು ಕನಿಷ್ಟ ವೇತನವಾಗಿ ನಿಗದಿಪಡಿಸಬೇಕೆನ್ನುವುದು ತಮ್ಮ ಪ್ರಮುಖ ಬೇಡಿಕೆಯಾಗಿದೆ. ಇದರೊಂದಿಗೆ ನಿವೃತ್ತ ಪಂಚಾಯ್ತಿ ನೌಕರರ ಬದುಕಿಗೆ ಆರ್ಥಿಕ ಸ್ಥಿರತೆ ನೀಡಲು 6 ಸಾವಿರ ರೂ. ಪಿಂಚಣಿ ನೀಡಬೇಕು. ಅನಾರೋಗ್ಯಕ್ಕೆ ಒಳಗಾದ ನೌಕರರಿಗೆ ಆಸ್ಪತ್ರೆ ವೆಚ್ಚವನ್ನು ಭರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪಂಚಾಯ್ತಿಗಳಿಗೆ ನೌಕರರನ್ನು ಗುತ್ತಿಗೆ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
2023ರ ನ.18 ರಂದು ಸರ್ಕಾರ ಆದೇಶವೊಂದನ್ನು ಹೊರಡಿಸಿ, 11,170 ಪಂಚಾಯ್ತಿ ನೌಕರರನ್ನು ಅನುಮೋದನೆಗೊಳಿಸಬೇಕೆಂದು ತಿಳಿಸಿತ್ತು. ಆದರೆ ಕೊಡಗು ಜಿಲ್ಲೆಯ ಗ್ರಾಮ ಪಂಚಾಯ್ತಿಗಳಲ್ಲಿ ಈ ಆದೇಶ ಕಾರ್ಯರೂಪಕ್ಕೆ ಬಂದಿಲ್ಲ. ತಕ್ಷಣ ಈ ಆದೇಶವನ್ನು ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಹಲವು ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಮಿಕರ ವೇತನವನ್ನು ತಿಂಗಳುಗಟ್ಟಲೆ ನೀಡದೆ ಬಾಕಿ ಉಳಿಸಿಕೊಂಡಿದ್ದು, ತಕ್ಷಣ ವೇತನ ನೀಡಬೇಕೆಂದು ಒತ್ತಾಯಿಸಿದ ಭರತ್, ಜಿಲ್ಲೆಯ ಪಂಚಾಯ್ತಿಗಳಲ್ಲಿ ಖಾಲಿ ಇರುವ 215 ವಿವಿಧ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು, ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು, ಎಲ್ಲಾ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಜಾರಿ ಮಾಡುವಂತೆ ಒತ್ತಾಯಿಸಿದರು.
ಸಮಿತಿ ಖಜಾಂಚಿ ಎಂ.ಕೆ.ವಸಂತ, ಜಿಲ್ಲಾ ಸಮಿತಿ ಸದಸ್ಯರಾದ ಪಿ.ರಂಗಸ್ವಾಮಿ, ಹೆಚ್.ಎಂ.ದಿನೇಶ್ ಸೇರಿದಂತೆ ಗ್ರಾ.ಪಂ ನೌಕರರು ಪಾಲ್ಗೊಂಡಿದ್ದರು.








