ವಿರಾಜಪೇಟೆ ಜ.24 NEWS DESK : ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಎಡೂರು ಗ್ರಾಮದಲ್ಲಿ ಶ್ರೀ ಕಲ್ಲುರ್ಟಿ ಮತ್ತು ಸ್ವಾಮಿ ಕೊರಗಜ್ಜ ಹಾಗೂ ಇತರ ದೈವದ ವಾರ್ಷಿಕ ಕೋಲವು ಶ್ರದ್ಧಾಭಕ್ತಿಯಿಂದ ಜರುಗಿತು.
ಗ್ರಾಮದ ಶ್ರೀ ಕಲ್ಲುರ್ಟಿ ಮತ್ತು ಕೊರಗಜ್ಜ ದೈವ ಸ್ಥಾನದಲ್ಲಿ ಎರಡು ದಿನಗಳ ಕಾಲ ನಡೆದ ದೈವ ಸೇವೆಗಳಲ್ಲಿ ಗಣಪತಿ ಹೋಮದೊಂದಿಗೆ ಆರಂಭವಾದ ವಾರ್ಷಿಕ ಉತ್ಸವವು ನಾಗ ತಂಬಿಲ ಸೇವೆ, ಸತ್ಯನಾರಾಯಣ ಪೂಜೆ, ಜೋಡಿ ಕಲ್ಲುರ್ಟಿ, ಪಾಷಣಮೂರ್ತಿ ದೈವಗಳ ಕೋಲಗಳು, ಗುಳಿಗ, ಮಂತ್ರ ದೇವತೆ, ಅಣ್ಣಪ್ಪ, ಪಂಜುರ್ಲಿ ಮತ್ತು ಸ್ವಾಮಿ ಕೊರಗಜ್ಜ ದೈವಗಳ ನೇಮೋತ್ಸವವು ಜರುಗಿತು.
ದೈವಗಳ ನೇಮೋತ್ಸವದ ಸಂಧರ್ಭದಲ್ಲಿ ಎಡೂರು, ಅಮ್ಮತ್ತಿ, ಕಣ್ಣಂಗಾಲ ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು.
ನೆರೆದಿದ್ದ ಭಕ್ತಾಧಿಗಳಿಗೆ ಉತ್ಸವ ಸಮಿತಿ ವತಿಯಿಂದ ಎರಡು ದಿನಗಳ ಹಗಲು ಮತ್ತು ರಾತ್ರಿ ಅನ್ನಸಂತರ್ಪಣೆ ಸೇವೆ ನಡೆಯಿತು.
ದೇವಾಲಯದ ಪ್ರಮುಖರಾದ ಲವನ್ ಪೂಜಾರಿ ಮತ್ತು ದೈವ ನರ್ತಕರು, ಹಾಗೂ ದೇಗುಲದ ಉತ್ಸವ ಸಮಿತಿಯ ಸದಸ್ಯರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ