ಮಡಿಕೇರಿ ಜ.25 : NEWS DESK ಕಾವೇರಿ ತುಲಾಸಂಕ್ರಮಣದ ಕಾವೇರಿ ತೀರ್ಥೋದ್ಭವದ ದಿನ ರಾಜ್ಯದಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ವಿರಾಜಪೇಟೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು, ಕರ್ನಾಟಕ ರಾಜ್ಯದ ಬಹುತೇಕ ಭಾಗ ಕೃಷಿ ಕಾರ್ಯಕ್ಕಾಗಿ ಕಾವೇರಿ ನದಿಯನ್ನೇ ಅವಲಂಬಿಸಿದೆ. ಕಾವೇರಿ ತಾಯಿ ತೀರ್ಥರೂಪಿಣಿಯಾಗಿ ದರ್ಶನ ನೀಡುವ ದಿನ ರಜೆ ನೀಡುವುದು ಸೂಕ್ತ ಎಂದರು.
ಕಾವೇರಿ ತೀರ್ಥೋದ್ಭವದ ಆಚರಣೆಗೆ ಹೆಚ್ಚಿನ ಅನುದಾನ ನೀಡಬೇಕೆಂದು ಮನವಿ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಬಡವರ, ದೀನ ದಲಿತರ, ಅಲ್ಪಸಂಖ್ಯಾತರ, ಕಾರ್ಮಿಕರ ಮತ್ತು ಪ್ರತಿಯೊಂದು ವರ್ಗದ ಜನರ ಏಳಿಗೆಗಾಗಿ ಶ್ರಮಿಸುತ್ತಿರುವ ಸರ್ಕಾರವಾಗಿದೆ ಎಂದು ಪೊನ್ನಣ್ಣ ಹೇಳಿದರು.