ಮಡಿಕೇರಿ ಜ.25 NEWS DESK : ಕಾಂಗ್ರೆಸ್ ಸರ್ಕಾರ ಪ್ರಸ್ತುತ ಬಿಜೆಪಿಯ ಯಾವುದೇ ಟೀಕೆಗಳಿಗೆ ಅವಕಾಶವಿಲ್ಲದಂತೆ ಪ್ರಣಾಳಿಕೆಯಲ್ಲಿ ಸೂಚಿಸಿದ ಭರವಸೆಗಳನ್ನು ಈಡೇರಿಸುವ ಮೂಲಕ, ಸಮಾಜದ ಎಲ್ಲ ವರ್ಗಗಳಿಗೆ ನೆರವಾಗುವ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು ರಾಜ್ಯದಲ್ಲಿ ‘ಶಾಂತಿಯ ತೋಟ’ವನ್ನು ನಿರ್ಮಿಸುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ವಿರಾಜಪೇಟೆಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಯ ಆರ್ಥಿಕ ಸ್ವಾವಲಂಬನೆಗಾಗಿ ಜಾರಿಗೊಳಿಸಿರುವ ಐದು ಗ್ಯಾರಂಟಿಗಳಿಂದ, ವಿಪಕ್ಷ ಬಿಜೆಪಿಯ ಟೀಕೆಗಳಂತೆ ರಾಜ್ಯದ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲವೆಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷ ಚುನಾವಣೆಯ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿದ ಸಂದರ್ಭ, ಇಂತಹ ಗ್ಯಾರಂಟಿಗಳ ಅನುಷ್ಠಾನ ಸಾಧ್ಯವಿಲ್ಲ, ಜಾರಿ ಮಾಡಿದಲ್ಲಿ ಸರ್ಕಾರ ದಿವಾಳಿಯಾಗುತ್ತದೆ, ರಾಜ್ಯ ಸಾಲದ ಹೊರೆಗೆ ಸಿಲುಕುತ್ತದೆಂದು ಬಿಜೆಪಿ ಟೀಕೆ ಟಿಪ್ಪಣಿ ಮಾಡಿತ್ತು. ಪ್ರಸ್ತುತ 14 ಬಾರಿ ಬಡ್ಜೆಟ್ ಮಂಡಿಸಿರುವ ಅನುಭವ ಹೊಂದಿರುವ ಸಿದ್ದರಾಮಯ್ಯ ನೇತೃತ್ವದಲ್ಲಿ ಗ್ಯಾರಂಟಿಗಳ ಜಾರಿಯೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇಂದು ಜಿಲ್ಲೆಯಲ್ಲಿ 350 ಕೋಟಿ ಅಭಿವೃದ್ಶಿ ಯೋಜನೆಗಳ ಶಂಕುಸ್ಥಾಪನೆ, ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನಡೆಯುತ್ತಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಜಾತಿ ಗಣತಿ ನಡೆಸುವ ಮೂಲಕ ಯಾವೆಲ್ಲ ಸಮುದಾಯ ಎಷ್ಟು ಸಂಖ್ಯೆಯಲ್ಲಿದೆ, ಅವರ ಸ್ಥಿತಿಗಳಿಗಳೇನೆಂದು ಅರಿತು ಅವರಿಗೆ ಹೆಚ್ಚಿನ ನೆರವು ನೀಡುವ ಮೂಲಕ ನ್ಯಾಯ ಒದಗಿಸುವ ಚಿಂತನೆ ಕಾಂಗ್ರೆಸ್ನದ್ದು. ವಿಪಕ್ಷಗಳ ಟೀಕೆ ಟಿಪ್ಪಣಿಗಳಿಗೆ ನಾವು ಬಗ್ಗುವುದಿಲ್ಲವೆಂದು ಪರಮೇಶ್ವರ್ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕÀ ಎ.ಎಸ್.ಪೊನ್ನಣ್ಣ, ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳನ್ನು ಟೀಕಿಸಿರುವ ಬಿಜೆಪಿ ಮಂದಿಯೂ ಅದರ ಪ್ರಯೋಜನವನ್ನು ಪಡೆದಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿರುವ ಗ್ಯಾರಂಟಿಗಳ ಸದುಪಯೋಗ ಪಡೆದವರ ಪಟ್ಟಿಯೊಂದಿಗೆ ಕಾರ್ಯಕರ್ತರು ಜನರ ಮನೆ ಬಾಗಿಲಿಗೆ ತೆರಳಿ ಜನಪರ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ತಿಳಿಸಬೇಕೆಂದು ಕರೆ ನೀಡಿದರು.
ಈ ನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಲು ಮುಖ್ಯ ಮಂತ್ರಿಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯವೆಂದು ಬಣ್ಣಿಸಿದ ಪೊನ್ನಣ್ಣ, ಅಭಿವೃದ್ಧಿಯ ಪಥದಲ್ಲಿ ಸಮಾನವಾಗಿ ಕೊಂಡೊಯ್ಯುವ ಮೂಲಕ ಅಭಿವೃದ್ಧಿ ಪರವಾದ ಸೌಹಾರ್ದತೆಯ ಸಮಾಜವನ್ನು ನಿರ್ಮಾಣ ಮಾಡಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದರು.
ಜಿಲ್ಲೆಯ ಕೃಷಿಕರು, ಬೆಳೆಗಾರರು ಸೇರಿದಂತೆ ಪ್ರತಿಯೊಬ್ಬರ ಸಂಕಷ್ಟಗಳಿಗೆ ಕಾಂಗ್ರೆಸ್ ಸರ್ಕಾರ ಸ್ಪಂದಿಸುತ್ತದೆ. ಮುಂದಿನ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಮೂಲಭೂತವಾದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾತ್ರವಲ್ಲ ಶಾಶ್ವತ ಪರಿಹಾರವನ್ನು ಒದಗಿಸುವ ಕೆಲಸ ಮಾಡುವುದಾಗಿ ವಿಶ್ವಾಸದಿಂದ ನುಡಿದರು.
ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಜನಪರವಾಗಿ ಕಾಂಗ್ರೆಸ್ ಸರ್ಕಾರ ಮುನ್ನಡೆಯುತ್ತಿದೆ. ಇದನ್ನು ಸಹಿಸಲಾಗದ ಮಂದಿ ಸಿದ್ದರಾಮಯ್ಯ ಅವರ ವಿರುದ್ಧ ನಾಲಿಗೆಯನ್ನು ಹರಿಬಿಡುತ್ತಿದ್ದಾರೆ. ಅಂತಹ ಟೀಕೆಗಳಿಗೆ ಉತ್ತರಿಸುವ ಅಗತ್ಯವಿಲ್ಲ, ಅವರ ನಾಲಿಗೆ ಅವರನ್ನೇ ಪರಿಚಯಿಸಿ ಕೊಡುತ್ತದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಂತಹ ಮಂದಿಯನ್ನು ಸಮಾಜದಿಂದ ದೂರವಿಡಬೇಕೆಂದು ಅವರು ಕರೆ ನೀಡಿದರು.
ಪಂಚ ಗ್ಯಾರಂಟಿಗಳ ಆಧಾರದಲ್ಲಿ ಲೋಕಸಭಾ ಚುಣಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.