ಮಡಿಕೇರಿ ಜ.31 NEWS DESK : ದಕ್ಷಿಣದ ಕಾಶ್ಮೀರವೆಂದೇ ಖ್ಯಾತಿ ಗಳಿಸಿರುವ ಕಾವೇರಿನಾಡು ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಮೂರು ಪಟ್ಟು ಹೆಚ್ಚಾಗುತ್ತಲೇ ಇದೆ. ರಾಜ್ಯದ ಆಕರ್ಷಕ ಚಾರಣತಾಣ ಸೋಮವಾರಪೇಟೆ ಮತ್ತು ಸುಬ್ರಹ್ಮಣ್ಯ ಪುಷ್ಪಗಿರಿ ವಲಯದ ಕುಮಾರಪರ್ವತಕ್ಕೆ ಕಳೆದವಾರ ಮಿತಿ ಮೀರಿ ಪ್ರವಾಸಿಗರು ಆಗಮಿಸಿದ್ದಾರೆ. ಚಾರಣಿಗರ ಸಂಖ್ಯೆ ಹೆಚ್ಚಳವಾದ ಕುರಿತು ವಿಡಿಯೋ ವೈರಲ್ ಆಗಿ ಅರಣ್ಯ ಇಲಾಖೆಯನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ಇದೇ ಕಾರಣದಿಂದ ಫೆ.1ರಿಂದ ಕುಮಾರಪರ್ವತಕ್ಕೆ ಪ್ರವೇಶಾವಕಾಶ ಬಂದ್ ಮಾಡಿ ಮುಂದಿನ ಅಕ್ಟೋಬರ್‍ನಿಂದ ಆನ್‍ಲೈನ್ ಬುಕಿಂಗ್ ಆರಂಭಿಸಲು ಅರಣ್ಯ ಅಧಿಕಾರಿಗಳು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪ್ರತಿನಿತ್ಯ ಸುಬ್ರಮಣ್ಯ ಮತ್ತು ಪುಷ್ಪಗಿರಿ ವನ್ಯಜೀವಿ ವಲಯದ ಕಡೆಯಿಂದ ತೆರಳಲು ತಲಾ 300 ಮಂದಿ ಚಾರಣಿಗರಿಗೆ ಮಾತ್ರ ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಜ.26ರಿಂದ ಸರಣಿ ರಜೆ ಇದ್ದುದರಿಂದ ಕುಕ್ಕೆ ಸುಬ್ರಮಣ್ಯ ವನ್ಯಜೀವಿ ಗೇಟ್‍ನಲ್ಲಿ ಸುಮಾರು 1200ಕ್ಕೂ ಅಧಿಕ ಚಾರಣಿಗರು ಟ್ರಕ್ಕಿಂಗ್ ಗೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ತಪಾಸಣಾ ಗೇಟ್‍ನಲ್ಲಿ ಕೆಲಕಾಲ ನೂಕುನುಗ್ಗಲು ಉಂಟಾಗಿತ್ತು. ಚಾರಣಿಗರು ಈ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಇದನ್ನು ಗಮನಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಡಿಎಫ್‍ಒ ಅವರಿಗೆ ಆದೇಶಿಸಿದ್ದರು. ಅರಣ್ಯ ಸಚಿವರ ಆದೇಶದನ್ವಯ ಕುಕ್ಕೆಸುಬ್ರಮಣ್ಯಕ್ಕೆ ತೆರಳಿದ್ದ ಮಡಿಕೇರಿ ವನ್ಯಜೀವಿ ವಿಭಾಗದ ಎಸಿಎಫ್ ಶ್ರೀನಿವಾಸ್ ನಾಯಕ್, ಆರ್‍ಎಫ್‍ಒ ಜೆ.ಅನನ್ಯಕುಮಾರ್, ಡಿಆರ್‍ಎಪ್‍ಒ ಶಶಿ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಡಿಎಫ್‍ಒ ಭಾಸ್ಕರ್ ಅವರಿಗೆ ವರದಿ ಸಲ್ಲಿಸಿದ್ದಾರೆ.
::: ಇಂದಿನಿಂದ ಬಂದ್ :::
ಸಾಮಾನ್ಯವಾಗಿ ಬೇಸಿಗೆ ಕಾಲದ ಫೆ.15ರಿಂದ ಕುಮಾರಪರ್ವತಕ್ಕೆ ಟ್ರಕ್ಕಿಂಗ್ ನಿಲ್ಲಿಸಲಾಗುತ್ತಿತ್ತು. ಆದರೆ ಈ ಬಾರಿ ವನ್ಯಜೀವಿ ಪ್ರದೇಶದಲ್ಲಿ ನೀರಿನ ಸೆಲೆ ಕಡಿಮೆಯಾಗುತ್ತಿರುವುದರಿಂದ ಫೆ.1ರಿಂದಲೇ ಬಂದ್ ಮಾಡಲಾಗುತ್ತಿದೆ. ಬೇಸಿಗೆ ಮತ್ತು ಮಳೆಗಾಲ ಕಳೆದ ನಂತರ ಅಕ್ಟೋಬರ್ ನಲ್ಲಿ ಪುನರಾರಂಭಿಸಲು ಅರಣ್ಯ ಇಲಾಖೆ ಮುಂದಾಗಿದೆ. ಪುಷ್ಪಗಿರಿ ವನ್ಯಜೀವಿ ಚೆಕ್ ಪೋಸ್ಟ್ ನಿಂದ ಪ್ರತಿನಿತ್ಯ 300 ಚಾರಣಿಗರಿಗೆ ಮತ್ತು ಕುಕ್ಕೆ ಸುಬ್ರಮಣ್ಯ ಕಡೆಯಿಂದ 300 ಚಾರಣಿಗರಿಗೆ ಮಾತ್ರ ಆನ್‍ಲೈನ್ ಬುಕ್ಕಿಂಗ್ ನ್ನು ಕೊಡಗು ಇಕೊ ಟೂರಿಸಂ ಮೂಲಕ ಮಾಡಿಕೊಡಲಾಗುವುದು ಎಂದು ಪುಷ್ಪಗಿರಿ ವನ್ಯಜೀವಿ ವಿಭಾಗದ ಆರ್‍ಎಫ್‍ಒ ಜೆ.ಅನನ್ಯಕುಮಾರ್ ತಿಳಿಸಿದ್ದಾರೆ.
ಪುಷ್ಪಗಿರಿ ವನ್ಯಜೀವಿ ಚೆಕ್ ಪೋಸ್ಟ್ ನಲ್ಲಿ ಪ್ರತಿನಿತ್ಯ 100-150 ಚಾರಣಿಗರು ಟ್ರಕ್ಕಿಂಗ್‍ಗೆ ಆಗಮಿಸಿದರೆ, ಕುಕ್ಕೆ ಕಡೆಯಿಂದ ಬೆಂಗಳೂರು ಮತ್ತು ರಾಜ್ಯದ ವಿವಿಧೆಡೆಗಳಿಂದ ಬಸ್‍ನಲ್ಲಿ ಬರಲು ಉತ್ತಮ ವ್ಯವಸ್ಥೆ ಇರುವುದರಿಂದ ಕುಕ್ಕೆಸುಬ್ರಮಣ್ಯ ಮಾರ್ಗವಾಗಿ ಹೆಚ್ಚು ಮಂದಿ ಬರುತ್ತಾರೆ. ಅಲ್ಲದೆ ಚಾರಣ ಪಥ ಹತ್ತಿರದಲ್ಲೇ ಇರುವುದರಿಂದ ಆ ಕಡೆಯಿಂದ ಬರುವ ಚಾರಣಿಗರ ಸಂಖ್ಯೆ ಪ್ರತಿನಿತ್ಯ ಸಾವಿರಕ್ಕೂ ಅಧಿಕವಾಗುತ್ತಿದೆ.
ಜ.26ರಂದು ಶುಕ್ರವಾರ ಕುಕ್ಕೆ ಸುಬ್ರಮಣ್ಯ ಚೆಕ್ ಪೋಸ್ಟ್ ನಲ್ಲಿ 1200ಕ್ಕೂ ಅಧಿಕ ಚಾರಣಿಗರು ಆಗಮಿಸಿದ್ದರು. ಚೆಕ್ ಪೋಸ್ಟ್ ನ ನಿಯಮದಂತೆ ಪ್ರತಿಯೊಬ್ಬರನ್ನು ತಪಾಸಣೆ ಮಾಡಲಾಗುತ್ತದೆ, ಈ ಸಂದರ್ಭ ಚಾರಣಿಗರು ಕೊಂಡೊಯ್ಯುವ ಪ್ಲಾಸ್ಟಿಕ್ ಬ್ಯಾಗ್ ಗಳು, ನೀರಿನ ಬಾಟಲ್‍ಗಳು, ಪ್ರತಿಯೊಂದು ಪ್ಲಾಸ್ಟಿಕ್ ವಸ್ತುಗಳ ಪಟ್ಟಿ ಮಾಡಿ ಸಂಗ್ರಹಿಸಿಡಲಾಗುತ್ತದೆ. ಟ್ರಕ್ಕಿಂಗ್ ಮುಗಿದ ನಂತರ ಅವುಗಳನ್ನು ಚಾರಣಿಗರಿಗೆ ಮರಳಿಸಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಪಟ್ಟಿ ಮಾಡುವಾಗ ಸ್ವಲ್ಪ ಸಮಯವಾಗುತ್ತದೆ. ಈ ಪ್ರಕ್ರಿಯೆ ಸಂದರ್ಭ ಚಾರಣಿಗರೊಬ್ಬರು ಜನದಟ್ಟಣೆ ಇರುವ ವಿಡಿಯೋ ವೈರಲ್ ಮಾಡಿದ್ದರು. ಪರಿಸರವಾದಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಟ್ರಕ್ಕಿಂಗ್ ನಿಷೇಧಿಸಬೇಕು ಅಥವಾ ಆನ್‍ಲೈನ್ ಮೂಲಕ ಬುಕ್ಕಿಂಗ್ ವ್ಯವಸ್ಥೆ ಮಾಡಿ ಪ್ರತಿನಿತ್ಯ 200 ಮಂದಿಗೆ ಮಾತ್ರ ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು.
::: ನೀರಿನ ಕೊರತೆ :::
ಪುಷ್ಪಗಿರಿ ವನ್ಯಜೀವಿ ವಲಯದಲ್ಲಿ ನೀರಿಗೆ ಕೊರತೆಯಾಗಿರುವುದರಿಂದ ಫೆ.1ರಿಂದಲೇ ಗೇಟ್‍ಗಳನ್ನು ಬಂದ್ ಮಾಡಲಾಗುತ್ತದೆ. ಮುಂದೆ ಅಕ್ಟೋಬರ್‍ನಲ್ಲಿ ಆರಂಭಿಸುವಾಗ ರಾಜ್ಯ ಸರ್ಕಾರದ ನೂತನ ಆದೇಶವನ್ನು ಪಾಲಿಸಲಾಗುವುದು. ಫೆ.1ರಿಂದ ಅನ್ವಯವಾಗುವಂತೆ ನೂತನ ನಿಯಮ ಜಾರಿಗೆ ಬರಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಕಠಿಣ ನಿರ್ಧಾರ ಕೈಗೊಳ್ಳಲಿದೆ.