ನಾಪೋಕ್ಲು ಫೆ.1 : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ದಿನಾಚರಣೆಯ ಪ್ರಯುಕ್ತ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮವಾದ ಸಂವಿಧಾನ ಜಾಗೃತಿ ಜಾಥಾ ಹೊದ್ದೂರಿನಲ್ಲಿ ನಡೆಯಿತು.
ಗ್ರಾಮದ ಯುವಕರ ಮುಂದಾಳತ್ವದ ಬೈಕ್ ಜಾಥಾ ಹಾಗೂ ಸಂಜೀವಿನಿ ಒಕ್ಕೂಟದದಿಂದ ಕಳಶದೊಂದಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಜಾಥಾಗೆ ಭವ್ಯ ಸ್ವಾಗತ ನೀಡಿದರು.
ಗ್ರಾ.ಪಂ ಆವರಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಶೈಲ ದೇಸಾಯಿ, ಗ್ರಾ.ಪಂ ಅಧ್ಯಕ್ಷ ಹಂಸ, ತಾಲ್ಲೂಕು ನೋಡಲ್ ಅಧಿಕಾರಿ ಹರ್ಷವರ್ಧನ್ ” ಸಂವಿಧಾನ” ಮಹತ್ವ ಕುರಿತು ಮಾತನಾಡಿದರು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಅನುರಾಧ, ಸದಸ್ಯರಾದ ಮೊಣ್ಣಪ್ಪ, ಹಮೀದ್, ಕುಸುಮಾವತಿ, ಪಾರ್ವತಿ, ಟೈನಿ, ಕೆ.ಆರ್.ಅನಿತಾ, ಚೌರೀರ ಅನಿತಾ, ಲಕ್ಷ್ಮಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎ.ಎ.ಅಬ್ದುಲ್ಲ, ಸಂಜೀವಿನಿ ಒಕ್ಕೂಟದ ಸದಸ್ಯರು, ಶಾಲಾ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತರು, ಗ್ರಾಮಸ್ಥರು ವಿಧ್ಯಾರ್ಥಿಗಳು ಭಾಗವಹಿಸಿದರು.
ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ವಿಭಾಗಗಳಲ್ಲಿ ನಡೆಸಲಾದ ಸ್ಪರ್ಧಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಪಂಚಾಯತಿ ಕಾರ್ಯದರ್ಶಿ ಚಂದ್ರಶೇಖರ್ ಸ್ವಾಗತಿಸಿ, ತಾರಾವತಿ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.
ವರದಿ : ದುಗ್ಗಳ ಸದಾನಂದ



































