ಕುಂದಾಪುರ, ಇದು ಜಿಲ್ಲಾ ಕೇಂದ್ರವಾದ ಉಡುಪಿಯಿಂದ 36 ಕಿಲೋ ಮೀಟರ್ ದೂರದಲ್ಲಿ ಇರುವ ತಾಲ್ಲೂಕು ಪಟ್ಟಣವಾಗಿದೆ. ಪಶ್ಚಿಮ ದಿಕ್ಕಿನಲ್ಲಿರುವ ಸಮುದ್ರ ತೀರವು ಕುಂದಾಪುರ ತಾಲ್ಲೂಕಿನ ಪ್ರಮುಖ ಆಕರ್ಷಣೆಗಳಲ್ಲೊಂದು. ಈ ತಾಲ್ಲೂಕಿನ ಗಂಗೊಳ್ಳಿಯಲ್ಲಿರುವ ಸೇತುವೆಯು ಉಡುಪಿ ಜಿಲ್ಲೆಯಲ್ಲೇಅತೀ ದೊಡ್ಡದು ಎಂಬ ಖ್ಯಾತಿ ಪಡೆದಿದೆ. ಬಡಗುತಿಟ್ಟು ಯಕ್ಷಗಾನ ಕಲೆಯನ್ನು ಬೆಳೆಸುವಲ್ಲಿ ಕುಂದಾಪುರದ ಪಾತ್ರ ಬಹಳ ಪ್ರಮುಖ. ಕುಂದಾಪುರದ ಮತ್ತೊಂದು ವಿಶೇಷವೆಂದರೆ, ಇದೊಂದು ಪರ್ಯಾಯ ದ್ವೀಪದ ರೂಪದಲ್ಲಿ- ಉತ್ತರ, ಪಶ್ಚಿಮ ಮತ್ತು ಪೂರ್ವ ದಿಕ್ಕಿನಲ್ಲಿ ನೀರಿದೆ- (ಸಮುದ್ರ, ಗಂಗೊಳ್ಳಿ ಹೊಳೆ ಮತ್ತು ಹಾಲಾಡಿ ಹೊಳೆ ಹಾಗೂ ಕೋಣಿ ಹಿನ್ನೀರು ಪ್ರದೇಶ) ಮತ್ತು ದಕ್ಷಿಣದಲ್ಲಿ ಮಾತ್ರ ನೆಲವಿರುವ ಪ್ರದೇಶವಾಗಿರುತ್ತದೆ. ಇಂತಹ ಒಂದು ವೈಚಿತ್ರ್ಯದ ಪ್ರಚಾರವಾಗಿಲ್ಲ ಮತ್ತು ಈ ನೀರಿನ ಇರವನ್ನು ಪ್ರವಾಸೋದ್ಯಮಕ್ಕೂ ಬಳಸುವ ಪ್ರಯತ್ನ ಹೆಚ್ಚಾಗಿ ನಡೆದಿಲ್ಲ. ಕುಂದಾಪುರ ಸಂತೆಯು ಸುತ್ತಲಿನ ನೂರಾರು ಹಳ್ಳಿಗಳ ವ್ಯಾಪಾರಕ್ಕೆ ಮತ್ತು ‘ಕೃಷಿ ಉತ್ಪನ್ನ ಮಾರಲು’ ಅನುಕೂಲ ಮಾಡಿಕೊಡುತ್ತಿದೆ.
ಪ್ರೇಕ್ಷಣೀಯ ಸ್ಥಳಗಳು :: ಬೈಂದೂರು ಕುಂದಾಪುರದಿಂದ ಸುಮಾರು 32 ಕಿ. ಮೀ ದೂರದಲ್ಲಿದೆ. ಕರ್ನಾಟಕದ ವಿವಿಧ ಪ್ರಸಿದ್ದ ಪ್ರವಾಸಿ ಸ್ಥಳಗಳಲ್ಲಿ ಬೈಂದೂರು ಒಂದು. ಮೊದಲು ಇಲ್ಲಿ ’ಬಿಂದುಋಷಿ’ ಎನ್ನುವ ಮಹರ್ಷಿಗಳು ತಪಸ್ಸು ಮಾಡುತ್ತಿದ್ದರಿಂದ ಬಿಂದುನಾಡು, ಬಿಂದುಪುರ, ಬಿಂದೂರು ಕ್ರಮೇಣ ಬೈಂದೂರು ಆಗಿ ಪರಿವರ್ತನೆ ಆಯಿತು ಎಂಬುವುದು ಕೆಲವು ತಜ್ಞರ ಅಭಿಪ್ರಾಯ. ಇಲ್ಲಿ ಹಲವಾರು ವರ್ಷಗಳ ಇತಿಹಾಸವಿರುವ “ಶ್ರೀ ಸೇನೆಶ್ವರ ದೇವಸ್ಥಾನ”ವು ಬಹಳ ಪ್ರಸಿದ್ದಿಯನ್ನು ಪಡೆದಿದೆ. ಬೈಂದೂರು ಹಲವಾರು ಪ್ರವಾಸಿ ಸ್ಥಳಗಳನ್ನು ಒಳಗೊಂಡಿದ್ದು ಅವುಗಳಲ್ಲಿ ಸೋಮೇಶ್ವರ ಕಡಲ ತೀರ,ಕೋಸಳ್ಳಿ ಜಲಪಾತ ಕೋಸಳ್ಳಿ|ಜಲಪಾತ, ಸಾಯಿ ವಿಶ್ರಾಮ್ ಬೀಚ್ ರೆಸಾರ್ಟ್, ಕ್ಷಿತಿಜ ನೇಸರ ದಾಮ ಮುಂತಾದವುಗಳು ಹೆಸರುವಾಸಿಗಳಾಗಿದೆ.
ಉಳ್ಳೂರು, ಮರವಂತೆ, ತ್ರಾಸಿ, ಮೆಕ್ಕೆ ಕಟ್ಟು, ಹಾಲಾಡಿ, ಒತ್ತಿನಾಣೆ, ವಾರಾಹಿ ಜಲವಿದ್ಯುತ್ ಉತ್ಪಾದನಾ ಕೇಂದ್ರ, ಆನೆಗುಡ್ಡೆ (ಕುಂಭಾಶಿ), ಕೊಲ್ಲೂರು, ಶಂಕರನಾರಾಯಣ, ಬಸ್ರೂರು, ಕೋಟೇಶ್ವರ, ಕಮಲಶಿಲೆ, ಮಾರಣಕಟ್ಟೆ, ಪವಿತ್ರ ರೋಸರಿ ಇಗರ್ಜಿ, ಉಪ್ಪಿನಕುದ್ರು, ಕೋಟ,ಸಾಲಿಗ್ರಾಮ, ಹಟ್ಟಿಯಂಗಡಿ, ಕಿರಿಮಂಜೇಶ್ವರ, ಕೋಡಿ ಸಮುದ್ರತೀರ, ತಲ್ಲೂರು ಮುಂತಾದ ಪ್ರೇಕ್ಷಣಿಯ ಸ್ಥಳಗಳು ಹಾಗೂ ದೇವಾಲಯಗಲಿಗೆ ಭೇಟಿ ನೀಡಬಹುದು.