ಮಡಿಕೇರಿ ಫೆ.5 NEWS DESK : ಕಂದಾಯ ಕಚೇರಿಗಳಲ್ಲಿ ಅರ್ಜಿಗಳ ವಿಲೇವಾರಿ ಮತ್ತು ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಕಾರ್ಯ ವಿಳಂಬವಾಗುತ್ತಿದ್ದು, ಸಮಸ್ಯೆ ಜಟಿಲವಾಗುತ್ತಿದೆ. ಜನಸಾಮಾನ್ಯರು ಕಂದಾಯ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿಯನ್ನು ತಪ್ಪಿಸಲು ಅಧಿಕಾರಿಗಳು ಅಗತ್ಯ ಸಹಕಾರ ನೀಡಿ ಜನಪರವಾಗಿ ಕಾರ್ಯನಿರ್ವಹಿಸಬೇಕು. ಕರ್ನಾಟಕ ರಾಜ್ಯ ಸರ್ಕಾರ ಇಂದಿನಿಂದ ಎಲ್ಲಾ ಸರ್ವೇ, ತಾಲ್ಲೂಕು ಕಚೇರಿ ಮತ್ತು ಸಬ್ ರಿಜಿಸ್ಟಾçರ್ ಕಚೇರಿಗಳ ದಾಖಲೆಗಳನ್ನು ಡಿಜಿಟಲೀಕರಣಕ್ಕೆ ಒಳಪಡಿಸಿದೆ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಮಡಿಕೇರಿಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಅಗತ್ಯ ಕೆಲಸ ಕಾರ್ಯಗಳು ನಿಗದಿತ ವೇಳೆಯಲ್ಲಿ ನಡೆಯದೆ ಉಂಟಾಗುತ್ತಿರುವ ಸಮಸ್ಯೆಗಳ ಬಗೆಹರಿಕೆಗೆ ರಾಜ್ಯ ಸರ್ಕಾರ ಕಳೆದ ಎಂಟು ತಿಂಗಳ ಅವಧಿಯಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ. ಇದರ ಪರಿಣಾಮ ಅರ್ಜಿಗಳ ವಿಲೇವಾರಿ ಮತ್ತು ಪ್ರಕರಣಗಳ ಇತ್ಯರ್ಥ ಪ್ರಸ್ತುತ ಚುರುಕುಗೊಂಡಿದೆ ಎಂದರು.
ಜನರ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಮನಸ್ಥಿತಿಯನ್ನು ಇಲಾಖಾ ಅಧಿಕಾರಿ, ಸಿಬ್ಬಂದಿಗಳು ಹೊಂದುವುದು ಅವಶ್ಯಕ. ತಮ್ಮ ಮೈಂಡ್ ಸೆಟ್ ಅಪ್ ನ್ನು ಬದಲಾಯಿಸಿಕೊಳ್ಳುವ ಮೂಲಕ ನಾವು ಜನರಿಂದ ಜನರಿಗಾಗಿ ಬಂದವರು ಎಂದು ಅರ್ಜಿದಾರರ ಅಹವಾಲಿಗೆ ತುರ್ತಾಗಿ ಸ್ಪಂದಿಸಬೇಕು ಎಂದು ಕರೆ ನೀಡಿದರು.
ಕೆಲಸ ಮಾಡಿಕೊಡುವುದು ಬೇಡ ಎನ್ನುವುದಕ್ಕೆ ನೂರು ಕಾರಣಗಳು ದೊರಕುತ್ತದೆ, ಅದೇ ಕೆಲಸ ಮಾಡಿಕೊಡಲೇಬೇಕೆನ್ನುವ ಭಾವನೆ ಇದ್ದಲ್ಲಿ ಅದಕ್ಕೆ ಹತ್ತಾರು ಹಾದಿಗಳು ತೆರೆದುಕೊಳ್ಳುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ತಹಶೀಲ್ದಾರ್ ಅವರ ನ್ಯಾಯಾಲಯದಲ್ಲಿ ದಾಖಲಾಗುವ ಯಾವುದೇ ಪ್ರಕರಣಗಳು 3 ತಿಂಗಳ ಒಳಗಾಗಿ ಇತ್ಯರ್ಥಗೊಳ್ಳಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಹಂತದಲ್ಲಿ ನಿಗದಿತ ಅವಧಿ ಕಳೆದರು ಇತ್ಯರ್ಥವಾಗದೆ ಉಳಿದಿದ್ದ 2515 ಪ್ರಕರಣಗಳಲ್ಲಿ ಪ್ರಸ್ತುತ 107 ಪ್ರಕರಣಗಳಷ್ಟೆ ಬಾಕಿಯಾಗಿದೆ. ಶೇ.95 ರಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅದೇ ರೀತಿ ಎಸಿ ನ್ಯಾಯಾಲಯದಲ್ಲಿ ಪ್ರಕರಣಗಳ ಇತ್ಯರ್ಥಕ್ಕೆೆ 6 ತಿಂಗಳ ಕಾಲಾವಕಾಶವಷ್ಟೆ ಇದೆ. ಹೀಗಿದ್ದು, ಅಲ್ಲಿ ಇತ್ಯರ್ಥವಾಗದ, ಐದು ವರ್ಷಕ್ಕೂ ಮೇಲ್ಪಟ್ಟ 32,787 ಪ್ರಕರಣಗಳಿವೆ, ಸುಮಾರು 26 ರಿಂದ 27 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅಂದು ಪ್ರಕರಣಗಳನ್ನು ಬಾಕಿ ಉಳಿಸಿಕೊಂಡವರು ನೀವೆ, ಇಂದು ಇತ್ಯರ್ಥಪಡಿಸಿದವರು ನೀವೆ ಎಂದು ಕೃಷ್ಣ ಬೈರೇಗೌಡ ಅಧಿಕಾರಿಗಳ ಸಹಕಾರವನ್ನು ಶ್ಲಾಘಿಸಿದರು.
::: ಪರಿಹಾರ ಬಿಡುಗಡೆ :::
ರಾಜ್ಯದಾದ್ಯಂತ ‘ಫ್ರೂಟ್ ಆಪ್’ ಮೂಲಕ ನೋಂದಣಿ ಮಾಡಿಕೊಂಡ 31 ಲಕ್ಷ ಬೆಳೆಗಾರರಿಗೆ 650 ಕೋಟಿ ರೂ. ಪರಿಹಾರವನ್ನು ಈಗಾಗಲೆ ಒದಗಿಸಲಾಗಿದೆ. ಇದರ ನಡುವೆಯೂ ಪರಿಹಾರ ದೊರಕದಿರುವ ಪ್ರಕರಣಗಳಿದ್ದಲ್ಲಿ, ಅದನ್ನು ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಈ ಸಂದರ್ಭ ಮಾಹಿತಿ ನೀಡಿ, ಕೊಡಗು ಜಿಲ್ಲೆಯಲ್ಲಿ 11,303 ಕೃಷಿಕ ಫಲಾಬನುಭವಿಗಳಿಗೆ ಈಗಾಗಲೆ 1.81 ಕೋಡಿ ರೂ.ಗಳನ್ನು ಪಾವತಿಸಲಾಗಿದೆಯೆಂದು ತಿಳಿಸಿದರು.
::: ಬಾಡಿಗೆಗೆ ಕೊಳವೆಬಾಯಿ :::
ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು. ಬರದ ಪರಿಸ್ಥಿತಿ ನಿರ್ವಹಿಸುವ ಸಲುವಾಗಿ ರಾಜ್ಯದಾದ್ಯಂತ ಈಗಾಗಲೆ ಸರ್ಕಾರ ಸುಮಾರು 3 ಸಾವಿರ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಆಧಾರದಲ್ಲಿ ಪಡೆದುಕೊಂಡಿದೆ. ಜಿಲ್ಲೆಗೆ ಸಂಬಂಧಿಸಿದಂತೆ ತಾಲ್ಲೂಕುವಾರು ಕುಡಿಯವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು, ಟ್ಯಾಂಕರ್‌ಗಳನ್ನು ವ್ಯವಸ್ಥೆ ಮಾಡಿಕೊಳ್ಳಬೇಕು. ಈ ಸಂಬಧ ಟೆಂಡರ್ ಕರೆದು ಟ್ಯಾಂಕರ್ ವ್ಯವಸ್ಥೆ ಮಾಡಿಕೊಳ್ಳಬೇಕು. ಕೊನೆಯ ಕ್ಷಣದಲ್ಲಿ ನೀರಿನ ಪೂರೈಕೆಯಲ್ಲಿ ಲೋಪಗಳಾಗಬಾರದೆಂದು ಸಚಿವರು ಹೇಳಿದರು.
:::: ‘ಪೈಕಿ ಖಾತೆ’ :::
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಜಾಗಕ್ಕೆ ಸಂಬಂಧಪಟ್ಟ ಹಲವು ಸಮಸ್ಯೆಗಳಿದ್ದು, ಇವುಗಳನ್ನು ಇತ್ಯರ್ಥ ಪಡಿಸುವ ಬಗ್ಗೆ ಸಚಿವರು ಸಮಾಲೋಚಿಸಿದರು.
ಈ ಸಂದರ್ಭ ಕಂದಾಯ ಆಯುಕ್ತ ಮಂಜುನಾಥ್ ಅವರು, ಜಿಲ್ಲೆಯ ಜಾಗದ ಸಮಸ್ಯೆ ಬಗ್ಗೆ ಮಾಹಿತಿ ನೀಡಿ, ರಾಜ್ಯ ವ್ಯಾಪಿ ಅವಿಭಜಿತ ಕುಟುಂಬಳಿಗೆ ಸಂಬಂಧಿಸಿದ ‘ಪೈಕಿ’ ಆರ್‌ಟಿಸಿಗಳಿವೆ. ಇವುಗಳಲ್ಲಿ ಸುಮಾರು 35 ಸಾವಿರ ಆರ್‌ಟಿಸಿಗಳು ಕೊಡಗಿನಲ್ಲೆ ಇವೆ. ಇವುಗಳ ಇತ್ಯರ್ಥಕ್ಕಾಗಿ ಈಗಾಗಲೆ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಇರುವ ಒಟ್ಟು ‘ಪೈಕಿ’ ಆರ್‌ಟಿಸಿಯಲ್ಲಿ 25 ಸಾವಿರ ಪೈಕಿ ಖಾತೆಗಳು ಖಾಸಗಿಯವು. ಇವುಗಳಲ್ಲಿ ಸಮಸ್ಯೆಗಳು ಇಲ್ಲದ ಸುಮಾರು 12 ಸಾವಿರ ಖಾತೆಗಳ ‘ಪೈಕಿ’ ಯನ್ನು ತೆಗೆಯಲು ಕ್ರಮ ಕೈಗೊಳ್ಳಲಾಗಿದೆ. ಉಳಿದವುಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಸಹಕಾರದೊಂದಿಗೆ ಸರ್ವೇ ಕಾರ್ಯಗಳು, ಆಯಾ ಜಾಗದ ಪಟ್ಟೆದಾರರ ಸಮ್ಮುಖದಲ್ಲಿ ನಡೆಸಬೇಕಾಗಿದೆಯೆಂದು ತಿಳಿಸಿದರು.
ಮಡಿಕೇರಿ ತಾಲ್ಲೂಕಿಗೆ ಸಂಬಂಧಿಸಿದಂತೆ ಪೈಕಿ ಖಾತೆಯ 38,300 ಏಕರೆ ಜಾಗದ ಸರ್ವೇ ಕಾರ್ಯ ನಡೆಯುತ್ತಿದೆ. ಈ ಸಂಬಂಧ ತಾಲ್ಲೂಕಿನ 98 ಗ್ರಾಮಗಳಲ್ಲಿ ಪೋಡಿ ಮುಕ್ತ ಗ್ರಾಮ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಮಾಹಿತಿ ನೀಡಿದರು.
::: ಆಧುನಿಕ ಸರ್ವೆ ಸಲಕರಣೆ :::
ಸಚಿವ ಕೃಷ್ಣ ಬೈರೇಗೌಡ ಮಾತನಾಡಿ ಜಾಗದ ಸಮಸ್ಯೆ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಗೆ ಸರ್ವೇಯರ್‌ಗಳನ್ನು ಹಾಗೂ ಆಧುನಿಕ ಸರ್ವೆ ಸಲಕರಣೆಗಳನ್ನು ನೀಡಲು ಸಿದ್ಧ ಇರುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.