ನಾಪೋಕ್ಲು ಫೆ.13 NEWS DESK : ಯಾವ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ ಸಕಲ ಜೀವಾತ್ಮಗಳಿಗೆ ಒಳಿತಾಗಬೇಕು ಎಂಬುದು ಎಲ್ಲಾ ಧರ್ಮಗಳ ಮೂಲ. ಸಮಾಜದಲ್ಲಿ ಎಲ್ಲರೂ ಒಳ್ಳೆಯವರಾಗಿ ಉತ್ತಮ ಪ್ರಪಂಚವನ್ನು ಕಟ್ಟಬೇಕು ಎಂದು ಅರಮೆರಿ ಕಳ೦ಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಇತಿಹಾಸ ಪ್ರಸಿದ್ಧ ಚೆರಿಯಪರಂಬು ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಬ್ದುಲ್ ರಾಹ್ಮಾನ್ ವಲಿಯುಲ್ಲಾಹಿ ಅವರ ಉರೂಸ್ ಸಮಾರಂಭದ ಪ್ರಯುಕ್ತ ಆಯೋಜಿಸಲಾಗಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವನವನ್ನು ಸಂತೋಷದಿಂದ ಅನುಭವಿಸುವುದು ಹೇಗೆ, ಆ ಸಂತೋಷದಲ್ಲಿ ನನ್ನೊಳಗೆ ನಾನು ಹುಡುಕಿಕೊಳ್ಳುವುದು ಹೇಗೆ ಎಂಬುದನ್ನು ನಮಗೆ ಎಲ್ಲಾ ಧರ್ಮಗಳು ಹೇಳಿಕೊಡಬೇಕು. ತನ್ನ ವೈಯುಕ್ತಿಕ ದ್ವೇಷಕ್ಕಾಗಿ ಅಪೇಕ್ಷೆಗಾಗಿ ಇಡೀ ಸಮಾಜ ಸಮುದಾಯವನ್ನು ಪಡೆಯುವ ಕೆಲಸವನ್ನು ಯಾರು ಮಾಡಬಾರದು, ದ್ವೇಷಗಳನ್ನು ಬೆಳೆಸಬಾರದು, ಸದಾ ಒಳ್ಳೆಯ ಆಲೋಚನೆ ಹಾಗೂ ಒಳ್ಳೆಯ ಚಿಂತನೆಯನ್ನು ಮಾಡಬೇಕು. ನೋಡುವ ನೋಟ ಆಡುವ ಭಾಷೆ ಕೇಳುವ ಕಿವಿ ಎಲ್ಲವೂ ಸರಿಯಾಗಿರಬೇಕು ಎಂದರು.
ನಾವು ಉತ್ತಮ ಮೌಲ್ಯ ಸಂದೇಶವನ್ನು ಸಮಾಜಕ್ಕೆ ನೀಡುವಂತಾಗಬೇಕು. ಸೌಹಾರ್ದಯುತ ಜೀವನ ನಡೆಸಲು ಸಂದೇಶ ನೀಡಿದ ಗುರುಗಳ ಮಹನೀಯರ ಜೀವನ ಮೌಲ್ಯಗಳು ಅಳವಡಿಸಿಕೊಳ್ಳಬೇಕು ಎಂದರು. ಧರ್ಮ ಒಂದು ಬೆಳಕು ಆ ಬೆಳಕಿನಲ್ಲಿ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕೆ ವಿನಃ ಧರ್ಮವನ್ನ ಬೆಂಕಿಯನ್ನಾಗಿ ಮಾಡಬಾರದು ಎಂದರು.
ಮೇರಿ ಮಾತೆ ದೇವಾಲಯದ ಧರ್ಮ ಗುರು ಜ್ಞಾನ ಪ್ರಕಾಶ್ ಮಾತನಾಡಿ, ಮಹನೀಯರ ಮೌಲ್ಯಗಳನ್ನು ಜೀವನದಲ್ಲಿ ರೂಡಿಸಿಕೊಂಡಾಗ ಸುಂದರ ಸಮಾಜವನ್ನು ಕಟ್ಟಿಕೊಳ್ಳಲು ಸಾಧ್ಯ. ಮನುಷ್ಯತ್ವವನ್ನು ಕಳೆದುಕೊಂಡಾಗ ಸಮಾಜ ಹಾಳಾಗುತ್ತದೆ ನಾವು ಈ ಭೂಮಿಯಲ್ಲಿ ಬದುಕಿರುವ ತನಕ ಉತ್ತಮರಾಗಿ ಬದುಕಬೇಕು ಎಂದರು.
ಕಾಫಿ ಬೆಳೆಗಾರ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮಾತನಾಡಿ, ಎಲ್ಲಾ ಧರ್ಮಗಳು ಉತ್ತಮವಾದದ್ದನ್ನೇ ಬೋಧಿಸುತ್ತವೆ. ನಮ್ಮ ತಪ್ಪುಗಳನ್ನು ತಿದ್ದಿಕೊಂಡಾಗ ಬದುಕು ಸಾರ್ಥಕವಾಗುತ್ತದೆ . ಪ್ರತಿ ಧರ್ಮದ ಹಿರಿಯರು ಸಮಾಜದಲ್ಲಿ ಯಾರ ತಪ್ಪು ಮಾಡಿದರೂ ತಿದ್ದುವ ಕೆಲಸ ಮಾಡಬೇಕು ಎಂದರು.
ಕೊಡಗು ಖಾಝಿ ಅಬ್ದುಲ್ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತವಿಕ ಮಾತುನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ಬಿ.ಎ. ಪ್ರತಿಪ, ವೇದಿಕೆಯಲ್ಲಿದ್ದ ಗಣ್ಯರು ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ಯಾನದ ಸಿರಾಜುದ್ದೀನ್ ಸಕಾಫಿ ಧಾರ್ಮಿಕ ಮುಖ್ಯ ಪ್ರಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಅರಮೆರಿ ಕಳ೦ಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ , ಮೇರಿ ಮಾತೆ ದೇವಾಲಯದ ಧರ್ಮ ಗುರು ಗಳಾದ ಜ್ಞಾನ ಪ್ರಕಾಶ್ ಕೊಡಗು ಖಾಝಿ ಅಬ್ದುಲ್ ಫೈಝಿ, ಕಾಫಿ ಬೆಳೆಗಾರ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ,ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ.ಪ್ರತಿಪ, ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ಅಧ್ಯಕ್ಷ ಟಿ. ಎಸ್.ಮಂಜಯ್ಯ, ಪಿ.ಎ.ಅನೀಫ್ ಮಾಜಿ ಅಧ್ಯಕ್ಷ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಇವರುಗಳನ್ನು ಜಮಾತ್ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಜಮಾಯತ್ ಆಡಳಿತ ಮಂಡಳಿ ಅಧ್ಯಕ್ಷ ಪರವಂಡ ಜುಬೇರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆರಿಯಪರಂಬು ಮಸೀದಿಯ ಖತೀಬರಾದ ಹಂಝ ರಹ್ಮಾನಿ, ಚೆರಿಯ ಪರಂಬು ಜಮಾಅತ್ ನ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಜಮಾಅತ್ ಪದಾಧಿಕಾರಿಗಳು, ಊರಿನ ಹಿರಿಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಜಮಾಯತ್ ಕಾರ್ಯದರ್ಶಿ ಪರವ0ಡ ಸಿರಾಜ್ ಸ್ವಾಗತಿಸಿ, ಜಮಾಯತ್ ಕೋಶಾಧಿಕಾರಿ ಪಿ.ಹೆಚ್.ಬಶೀರ್ ವಂದಿಸಿದರು.
ವರದಿ : ದುಗ್ಗಳ ಸದಾನಂದ.