ನಾಪೋಕ್ಲು ಫೆ.13 : ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಫೆಬ್ರವರಿ 16 ರಂದು ರಾಜ್ಯ ಬಜೆಟ್ ಮಂಡಿಸಲಿದ್ದು, ಈ ಸಂದರ್ಭದಲ್ಲಿ ಕೊಡಗಿನ ಜನತೆಗೆ ಪೂರಕವಾಗುವ ಯೋಜನೆಗಳನ್ನು ಘೋಷಿಸಬೇಕೆಂದು ಭಾರತೀಯ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಹಾಗೂ ಕೊಡಗು ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲೆ, ಪುಟ್ಟ ಜಿಲ್ಲೆಯಾಗಿದ್ದು, ವರ್ಷದ ಹಲವು ತಿಂಗಳು ಮಳೆಯಿಂದ ಕೂಡಿರುತ್ತದೆ .ಈ ಸಂದರ್ಭದಲ್ಲಿ ಗ್ರಾಮೀಣ ರಸ್ತೆಗಳು ಹದಗೆಡುತ್ತಿವೆ .ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ 100 ಕೋಟಿ ರೂ.ಗಳ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯದ ವಿವಿಧ ಭಾಗಗಳ ರೈತರಿಗೆ 10 ಹೆಚ್.ಪಿ ವರೆಗೆ ಉಚಿತ ವಿದ್ಯುತ್ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ ಕೊಡಗಿನ ಜನತೆಗೆ ಈ ಸೌಲಭ್ಯ ನೀಡುತ್ತಿಲ್ಲ. ಕಾಫಿ ಬೆಳೆಗಾರರಿಗೂ 10 ಹೆಚ್ ಪಿ ವರೆಗೆ ಉಚಿತ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಬೇಕು, ಕಾಫಿ ಬೆಳೆಗಾರರಿಗೆ ಸೋಲಾರ್ ಸಬ್ಸಿಡಿ ಸ್ಕೀಮ್ ಅನ್ನು ಸಿಗುವಂತೆ ಮಾಡಬೇಕು.
ಪ್ರಸ್ತುತ ದಿನಗಳಲ್ಲಿ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ತುರ್ತು ಚಿಕಿತ್ಸಾ ಘಟಕ ಇಲ್ಲದೆ ಅಪಘಾತಕ್ಕೀಡಾದವರನ್ನು ದೂರದ ಮಂಗಳೂರು, ಮೈಸೂರು ಭಾಗಗಳಿಗೆ ಕರೆದೊಯ್ಯಬೇಕಾಗಿದೆ. ಸೂಕ್ತ ಚಿಕಿತ್ಸೆ ನೀಡಲು ತುರ್ತುಚಿಕಿತ್ಸ ಘಟಕವನ್ನು ಕೊಡಗಿನಲ್ಲಿ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಇನ್ನು ಹಲವು ವರ್ಷಗಳಿಂದ ಆನೆ-ಮಾನವ ಸಂಘರ್ಷ ಜಿಲ್ಲೆಯಲ್ಲಿ ಮುಂದುವರೆದಿದೆ. ಆನೆಗಳಿಗೆ ನೀರು ಆಹಾರ ಸಿಗುತ್ತಿಲ್ಲ ಹಾಗಾಗಿ ಅವು ಕಾಫಿ ತೋಟಗಳಲ್ಲಿ ನುಗ್ಗಿ ದಾಂದಲೆ ಮಾಡುತ್ತಿವೆ. ಆನೆ -ಮಾನವ ಸಂಘರ್ಷ ತಪ್ಪಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವರದಿ : ದುಗ್ಗಳ ಸದಾನಂದ.