ಮಡಿಕೇರಿ ಫೆ.17 NEWS DESK : ನಿಟ್ಟೂರು ಗ್ರಾ.ಪಂ ವತಿಯಿಂದ ಸಂವಿಧಾನ ಜಾಗೃತಿ ಜಾಥಾಕ್ಕೆ ಭವ್ಯ ಸ್ವಾಗತ ನೀಡಲಾಯಿತು.
ಜಾಥಾ ಅಂಗವಾಗಿ ಅಂಬೇಡ್ಕರ ಪ್ರತಿಮೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.
ಯುವಕ ಯುವತಿಯರು ಬೈಕ್ ರ‌್ಯಾಲಿ ಆಯೋಜಿಸಿದ್ದರು. ಗಿರಿಜನರ ಕಲಾತಂಡಗಳು ನೃತ್ಯ ದೊಂದಿಗೆ ಮಹಿಳೆಯರು ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದರು. ಕಾರ್ಮಾಡು ಪ್ರಾಥಮಿಕ ಶಾಲೆ ಗೇಟಿನಿಂದ ಗ್ರಾ.ಪಂ ಸಭಾಂಗಣದ ತನಕ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಂವಿಧಾನದ ಮಹತ್ವ ತಿಳಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಪ್ರೀತಿ ಚಿಕ್ಕ ಮಾದಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಪ್ರತಿ ಗ್ರಾಮ ಪಂಚಾಯಿತಿಗೂ ತೆರಳುವ ಸಂವಿಧಾನ ಜಾಗೃತಿ ಜಾಥಾದ ಮೂಲಕ ಗ್ರಾಮೀಣ ಭಾಗದ ಜನರಲ್ಲಿ ಸಂವಿಧಾನದ ಧ್ಯೇಯೋದ್ದೇಶದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡುವ ಕಾರ್ಯ ಮಾಡುತ್ತಿದೆ. ಈ ಜಾಥಾಕ್ಕೆ ನಿಟ್ಪೂರು ಗ್ರಾ.ಪಂ ವ್ಯಾಪ್ತಿಯ ಜನ ಅಭೂತಪೂರ್ವ ಸ್ಪಂದನೆ ನೀಡಿರುವುದನ್ನು ಶ್ಲಾಘಿಸಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ವಾಲ್ಮೀಕಿ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ಬಸವರಾಜು, ಡಾ.ಅಂಬೇಡ್ಕರ್ ಸಾಮಾಜಿಕವಾಗಿ ಹಿಂದುಳಿದ ವರ್ಗದಿಂದ ಬಂದು ವಿಶ್ವದ ಅತ್ಯಂತ ದೊಡ್ಡ ಲಿಖಿತ ಸಂವಿಧಾನವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ಇಂದು ಜಗತ್ತೇ ನಮ್ಮ ದೇಶದ ಸಾಮಾಜಿಕ ಮತ್ತು ಸಾಂವಿಧಾನಿಕ ವ್ಯವಸ್ಥೆಯನ್ನು ಮುಚ್ಚುವಂತೆ ಮಾಡಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿಟ್ಪೂರು ವಾಲ್ಮೀಕಿ ಆಶ್ರಮ ಶಾಲೆಯ ಮಕ್ಕಳು ಸಂವಿಧಾನದ ಶ್ರೇಯಸ್ಸನ್ನು ಸಾರುವ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಿಟ್ಪೂರು ಗ್ರಾ.ಪಂ ಅಧ್ಯಕ್ಷರಾದ ಅಮ್ಮಣಿ, ಉಪಾಧ್ಯಕ್ಷರಾದ ಚಕ್ಕೇರ ಸೂರ್ಯಅಯ್ಯಪ್ಪ, ಸಂವಿಧಾನ ಜಾಥಾದ ನೋಡಲ್ ಅಧಿಕಾರಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ನವೀನ್ ಕುಮಾರ್, ನಿಟ್ಪೂರು ಗ್ರಾ.ಪಂ ಸದಸ್ಯರುಗಳಾದ ಕಾಟಿಮಾಡ ಶರೀನ್ ಮುತ್ತಣ್ಣ, ಪಡಿಞರಂಡ ಕವಿತಾ ಪ್ರಭು, ಅಮ್ಮಯ್ಯ, ರಾಜು ಸೇರಿದಂತೆ ಗ್ರಾಮಸ್ಥರು ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.
ಪಡಿಞರಂಡ ಪ್ರಭು ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿಟ್ಟೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುರೇಶ್ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಕಾವೇರಿ ಪ್ರಾರ್ಥಿಸಿದರು.