ಮಡಿಕೇರಿ ಫೆ.22 NEWS DESK : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಗ್ರಾಮವೊಂದರ ಅಪ್ರಾಪ್ತೆಯೊಬ್ಬಳು ಅತ್ಯಾಚಾರದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾದ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕೆಂದು ವಿಮನ್ ಇಂಡಿಯಾ ಮೂಮೆಂಟ್ ಒತ್ತಾಯಿಸಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ ಸಂಘಟನೆಯ ಪ್ರಮುಖರು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ವ್ಯಾಪಿ ಹೋರಾಟ ತೀವ್ರಗೊಳ್ಳುತ್ತಿದ್ದು, ಇದೊಂದು ವಿಶೇಷ ಪ್ರಕರಣವೆಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಪರಿಗಣಿಸಬೇಕೆಂದು ಆಗ್ರಹಿಸಿದರು.
ಪ್ರಕರಣವನ್ನು ತಿರುಚುವ ಪ್ರಯತ್ನಗಳು ನಡೆದಿರುವುದು ಖಂಡನೀಯ, ಪೊಲೀಸ್ ಇಲಾಖೆ ಕಾನೂನು ಚೌಕಟ್ಟಿನಡಿ ಅಗತ್ಯ ಕ್ರಮ ಕೈಗೊಂಡು ಶಾಮೀಲಾಗಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷೆ ಸಲೀಕತ್, ಕಾರ್ಯದರ್ಶಿ ರಿಶಾನ, ಮಡಿಕೇರಿ ನಗರಸಭಾ ಸದಸ್ಯೆ ಮೇರಿ ವೇಗಸ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.









