ಸೋಮವಾರಪೇಟೆ ಫೆ.23 NEWS DESK : ವಿದ್ಯುತ್ ಬಿಲ್ ಬಾಕಿ ನೆಪದಲ್ಲಿ ಸೆಸ್ಕ್ ನವರು ಕಾಫಿ ಬೆಳೆಗಾರರ 10ಎಚ್.ಪಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತಪರ ಸಂಘಟನೆಗಳ ಸಹಕಾರದಿಂದ ಆಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರುಗಳು ಕಾಫಿ ಬೆಳೆಗಾರರ ರಕ್ಷಣೆಗೆ ಬರಬೇಕು, ಮುಖ್ಯಮಂತ್ರಿ ಹಾಗೂ ಇಂಧನ ಸಚಿವರೊಂದಿಗೆ ಚರ್ಚಿಸಿ ಬೆಳೆಗಾರರ ಬಾಕಿ ವಿದ್ಯುತ್ ಬಿಲ್ ಮನ್ನಾ ಮಾಡಿಸಬೇಕು. ಯಾವುದೇ ಷರತ್ತಿಲ್ಲದೆ 10 ಎಚ್‌ಪಿ ಒಳಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕಲ್ಪಿಸುವ ಸರ್ಕಾರದ ಅದೇಶದ ಪ್ರತಿಯನ್ನು ಬಿಡುಗಡೆ ಮಾಡಬೇಕು ಎಂದು ಸೋಮವಾರಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕೊಡಗು ಜಿಲ್ಲೆ ಬರಪೀಡಿತ ತಾಲ್ಲೂಕ್ಕೆಂದು ಘೋಷಣೆಯಾಗಿದೆ. ಪ್ರಸಕ್ತ ವರ್ಷ ಅಕಾಲಿಕ ಮಳೆಯಿಂದ ಕಾಫಿ ಕೊಯ್ಲಿನ ಸಂದರ್ಭ ಕಾಫಿ ಮಣ್ಣು ಪಾಲಾಗಿದೆ. ಅತೀಯಾದ ಬಿಸಿಲಿನಿಂದ ಕಾಫಿ ಗಿಡಗಳು ಒಣಗುತ್ತಿವೆ. ಮಾರ್ಚ್ ಕೊನೆ ವಾರದಲ್ಲಿ ಕಾಫಿ ಗಿಡಗಳಲ್ಲಿ ಹೂ ಅರಳಿಸಬೇಕಾಗಿದೆ. ಈ ಸಂದರ್ಭದಲ್ಲಿ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ಕಡಿತಗೊಳಿಸಿರುವ ವಿದ್ಯುತ್ ಸಂಪರ್ಕವನ್ನು ಮರುಜೋಡಣೆ ಮಾಡಬೇಕು. ಅರ್ಥಿಕ ಸಂಕಷ್ಟದಲ್ಲಿರುವ ಸಣ್ಣ ಕಾಫಿ ಬೆಳೆಗಾರರ ಬಾಕಿಯಿರುವ ವಿದ್ಯುತ್ ಬಿಲ್ ಮನ್ನಾ ಮಾಡಬೇಕು. ತಪ್ಪಿದಲ್ಲಿ ವಿವಿಧ ರೈತಪರ ಸಂಘಟನೆಗಳ ಸಹಕಾರದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಆಹೋರಾತ್ರಿ ಪ್ರತಿಭಟನೆ ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳ ಅಡಿಕೆ, ಕಬ್ಬು, ಜೋಳ, ಭತ್ತ, ಹೊಗೆಸೊಪ್ಪು, ಮಾವು ಸೇರಿದಂತೆ ಇನ್ನಿತರ ಕೃಷಿ ಬೆಳೆಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಆದರೆ ಕಾಫಿ ಬೆಳೆಗಾರರಿಗೆ ಈ ತಾರಾತಮ್ಯವೇಕೆ? ಎಂದು ಪ್ರಶ್ನಿಸಿದ ಅವರು, ಕೊಡಗು ಕೇವಲ ಚಿನ್ನದ ಮೊಟ್ಟೆಯಿಡುವ ಕೋಳಿ ಎಂದು ಸರ್ಕಾರ ಭಾವಿಸಬಾರದೆಂದು ಹೇಳಿದರು.
ಕಾಫಿ ವಿದೇಶಿ ವಿನಿಮಯ ಮತ್ತು ತೆರಿಗೆಯಿಂದ ಸರ್ಕಾರಗಳಿಗೆ ಸಾವಿರಾರು ಕೋಟಿ ಅದಾಯ ಬರುತ್ತಿದೆ. ಕೇವಲ 3-4 ಕೋಟಿ ರೂ.ಗಳಲ್ಲಿ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಬಹುದು ಎಂದು ಅಭಿಪ್ರಾಯಪಟ್ಟ ದೀಪಕ್, ಕಾಫಿ ಉತ್ಪಾದನೆ ಹೆಚ್ಚಾದರೆ ಕಾರ್ಮಿಕ ವಲಯ, ವ್ಯಾಪಾರ ಸೇರಿದಂತೆ ಎಲ್ಲಾ ವಲಯಗಳಲ್ಲೂ ಆರ್ಥಿಕ ಸಬಲತೆ ಹೆಚ್ಚಾಗುತ್ತದೆ ಎಂದರು.
ಕೊಡಗಿನಲ್ಲಿ ಗ್ರಾಮೀಣ ಭಾಗದ ರೈತರೆ ಗುಣಮಟ್ಟದ ಕಾಫಿ ಬೆಳೆಯುತ್ತಿದ್ದಾರೆ. ಅಕಾಲಿಕ ಮಳೆ ಸುರಿಯುತ್ತಿರುವುದರಿಂದ, ನಿಗದಿತ ಸಮಯದಲ್ಲಿ ಕಾಫಿ ಗಿಡಗಳಿಗೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಬಿಳಿಕಾಂಡ ಕೊರಕ, ಕಾಯಿ ಕೊರಕಗಳ ಹಾವಳಿ ಹೆಚ್ಚಾಗಿ ಕಾಫಿ ತೋಟಗಳೇ ರೋಗಪೀಡಿತವಾಗುತ್ತಿವೆ. ಹತ್ತು ಸಾವಿರ ಮೌಲ್ಯದ ವಿದ್ಯುತ್ ಉಪಯೋಗಿಸಿದ ಬೆಳೆಗಾರನಿಗೆ 80ರಿಂದ ಒಂದು ಲಕ್ಷ ರೂ.ಗಳ ಬಿಲ್ ಹಾಕಿದ್ದಾರೆ. ಈಗ ಬಿಲ್ ಪಾವತಿಸದಿದ್ದರೆ ಪೊಲೀಸರ ಸಹಕಾರದಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇವೆ ಎಂದು ಸೆಸ್ಕ್ ಅಧಿಕಾರಿಗಳು ಹೇಳುತ್ತಿದ್ದಾರೆ, ಕೆಲವು ಬೆಳೆಗಾರರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ನಗರಾಧ್ಯಕ್ಷ ಮಂಜುನಾಥ್, ತಾಲ್ಲೂಕು ಸಂಚಾಲಕ ಚಂದ್ರು ಹಾಗೂ ಪದಾಧಿಕಾರಿ ಆದರ್ಶ್ ತಮ್ಮಯ್ಯ ಉಪಸ್ಥಿತರಿದ್ದರು.










