ಮಡಿಕೇರಿ ಫೆ.23 NEWS DESK : ಕರ್ನಾಟಕ ರಾಜ್ಯ ಸುಭಿಕ್ಷವಾಗಬೇಕು ಎಂದರೆ ಕೊಡಗು ಸುಭಿಕ್ಷವಾಗಿರಬೇಕು ಎಂದು ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ್ ಅಭಿಪ್ರಾಯಪಟ್ಟರು.
ಕುಶಾಲನಗರದ ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಾಲಯದ 10ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮತ್ತು ದೇವಿಗೆ ಸ್ವರ್ಣ ಮುಖ ಕವಚ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನಲ್ಲಿ ಹುಟ್ಟಿ ರಾಜ್ಯದ ಲಕ್ಷಾಂತರ ಜನರ ಬಾಯಾರಿಕೆ ನೀಗಿಸುವ, ಲಕ್ಷಾಂತರ ಎಕರೆಯಲ್ಲಿ ಬೆಳೆ ಬೆಳೆಯಲು ಕಾವೇರಿ ಮಾತೆಯ ಕೊಡುಗೆ ಅನನ್ಯವಾದದ್ದು. ಅಂತಹ ಶ್ರೇಷ್ಠ ಸ್ಥಳದಲ್ಲಿ ವಾಸವಿ ಮಾತೆಯ ವಿಗ್ರಹದ ಮುಖಕ್ಕೆ ಸ್ವರ್ಣದ ಮುಖವಾಡ ಅರ್ಪಿಸಿದ್ದು ನಮ್ಮೆಲ್ಲರ ಭಾಗ್ಯ. ವಿಶ್ವದಲ್ಲಿ ಭಾರತದ ಘನತೆ ಹೆಚ್ಚಾಗುತ್ತಿರುವ ಹಾಗೆಯೇ ದೇಶದ ಹಿಂದೂ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆಯೂ ವಿಶ್ವ ತಿಳಿಯಲು ಪ್ರೇರೇಪಣೆ ಆಗುತ್ತಿದೆ ಎಂದರು.
ನಿರಾಡಂಭರ ಮೂರ್ತಿಗೆ ಆಡಂಭರದ ಪೂಜೆ ಎಂದು ನಾಸ್ತಿಕರು ಹೇಳುತ್ತಾರೆ. ನಾವು ದೇವಸ್ಥಾನಗಳನ್ನು ಅತ್ಯಂತ ಉನ್ನತ ಮಟ್ಟದಲ್ಲಿ ನೋಡುತ್ತೇವೆ. ನಾವು ಇವರುವುದಕ್ಕಿಂತ ಹೆಚ್ಚಿನ ಉನ್ನತ ಮಟ್ಟದಲ್ಲಿ ದೇವರನ್ನು ನೋಡಲು ಬಯಸುವವರು ನಾವುಗಳು. ಅದರಿಂದ ದೇವರುಗಳಿಗೆ ಅಲಂಕಾರ ಮಾಡಿ ಕಣ್ಣು ತುಂಬಿಕೊಳ್ಳುತ್ತೇವೆ ಎಂದರು.
ರಾಜ್ಯದಲ್ಲಿ ನಮ್ಮ ಜನಾಂಗದವರ ಜನಸಂಖ್ಯೆ 4.5 ಲಕ್ಷ. ರಾಜ್ಯದಲ್ಲಿ ಕನ್ನಿಕಾಪರಮೇಶ್ವರಿ ದೇವಸ್ಥಾನವಿರುವುದು 300. ಇನ್ನು 30 ರಿಂದ 35 ದೇವಸ್ಥಾನ ನಿರ್ಮಾಣ ಆಗುವ ಹಂತದಲ್ಲಿ ಇವೆ. ನಮ್ಮ ಸಮಾಜದಿಂದ ಧರ್ಮ ಜಾಗೃತಿಗಾಗಿ 25 ಕೋಟಿಗೂ ಹೆಚ್ಚು ಖರ್ಚು ಮಾಡುತ್ತಿದ್ದೇವೆ. ರಾಜ್ಯದಲ್ಲಿ ಶ್ರೀಮಂತರು ಹಲವರು ಇದ್ದರು, ಹೃದಯ ಶ್ರೀಮಂತರು ಕೆಲವರಷ್ಟೇ. ಆ ಕೆಲವರಲ್ಲಿ ನಮ್ಮ ಸಮಾಜವು ಒಂದು. ಅಂದರೆ ನಮ್ಮ ಜನಾಂಗದವರು ಧರ್ಮ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಅಪಾರವಾದ ಕೊಡುಗೆ ನೀಡುತ್ತಿದ್ದಾರೆ ಎನ್ನುವುದು ಸ್ಪಷ್ಟ ಎಂದರು.
ಸದಾ ಲೋಕ ಕಲ್ಯಾಣಕ್ಕಾಗಿ ಪ್ರತಿನಿತ್ಯ ದೇವರುಗಳಿಗೆ ಅಭಿಷೇಕ ಪೂಜೆ ಸಲ್ಲಿಸುವರು ಆರ್ಯವೈಶ್ಯ ಸಮಾಜದವರು ಎಂದು ಶ್ಲಾಘಿಸಿದರು.
10ನೇ ವರ್ಷದ ಪ್ರತಿಷ್ಠಾ ವರ್ಧಂತಿ ಅಂಗವಾಗಿ ದೇವಸ್ಥಾನದಲ್ಲಿ ಚಂಡಿಕಾ ಹೋಮ ನಡೆಯಿತು.
ಕುಶಾಲನಗರ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಬಿ.ಎಲ್.ಉದಯಕುಮಾರ್ ಮಾತನಾಡಿ, ದಾನಿಗಳ ಸಹಕಾರದಿಂದ ದೇವಿಗೆ ಮುಖ ಸ್ವರ್ಣ ಕವಚ ಅರ್ಪಿಸಲಾಗಿದೆ. ದೇವರ ಇಚ್ಛೆಯಂತೆ ಎಲ್ಲ ನಡೆಯುವುದರಿಂದ ಮಾತೆಯ ಆಜ್ಞೆಯಂತೆ ನಡೆಯೋಣ ಎಂದು ಕರೆ ನೀಡಿದರು.
ದೇಶದಲ್ಲಿ ಯಾರು ಹಸಿವಿನಿಂದ ತೊಂದರೆಗೆ ಒಳಗಾಗಬಾರದೆಂದು ವಾಸವಿ ಮಹಲ್ ನಲ್ಲಿ ಅನ್ನದ ರಾಶಿಯನ್ನು ಇಟ್ಟು ಅನ್ನ ಪೂಜೆ ಮಾಡಲಾಯಿತ್ತು ಎಂದು ತಿಳಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕ ಗಿರೀಶ್ ಭಟ್ ನೇತೃತ್ವದಲ್ಲಿ ಪ್ರಮೋದ್ ಭಟ್, ರಾಘವೇಂದ್ರ ಭಟ್ ಇತರರು ಪೂಜಾ ಕೈಂಕರ್ಯ ನಡೆಸಿದರು.
ಮಹಾಸಭಾದ ಕೊಡಗು ಜಿಲ್ಲಾ ನಿರ್ದೇಶಕ ಬಿ.ಆರ್.ನಾಗೇಂದ್ರ ಪ್ರಸಾದ್, ಆರ್ಯವೈಶ್ಯ ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್, ಯುವತಿಯರ ಸಂಘದ ಅಧ್ಯಕ್ಷೆ ಕವಿತಾ, ಯುವಜನ ಸಂಘದ ಅಧ್ಯಕ್ಷ ಪ್ರವೀಣ್, ಸಮಾಜದ ಹಿರಿಯರಾದ ವಿ.ಎನ್.ಪ್ರಭಾಕರ್, ಕೆ.ಜೆ.ನಾಗೇಂದ್ರ ಗುಪ್ತ, ವಿ.ಪಿ.ರಾಜಗೋಪಾಲ್ ಮತ್ತು ಆರ್ಯವೈಶ್ಯ ಕುಲಾಭಾಂಧವರು ಹಾಜರಿದ್ದರು.









